ADVERTISEMENT

ತಾಯ್ನುಡಿ ಭಾಷೆಗಳನ್ನು ರಕ್ಷಿಸಬೇಕು: ಪುರುಷೋತ್ತಮ ಬಿಳಿಮಲೆ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2024, 15:53 IST
Last Updated 22 ಆಗಸ್ಟ್ 2024, 15:53 IST
   

ಬೆಂಗಳೂರು: ‘ಭಾರತ ಹಲವು ಭಾಷೆಗಳ ತವರೂರಾಗಿದೆ. ಇಲ್ಲಿನ ಭಾಷೆಗಳು ನಶಿಸಿ ಹೋಗದ ರೀತಿಯಲ್ಲಿ ಸಂರಕ್ಷಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಜಂಟಿಯಾಗಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಶಾಸ್ತ್ರೀಯ ಕನ್ನಡ ಸ್ಥಾನಮಾನ ಮತ್ತು ಕನ್ನಡ ಜಾಗೃತಿ’ ವಿಚಾರ ಸಂಕಿರಣ ಉದ್ಘಾಟಿಸಿ, ಮಾತನಾಡಿದರು.

‘ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಅಸ್ಸಾಮಿ, ಬಂಗಾಳಿ, ಬೋಡೊ, ಡೋಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ತೆಲುಗು, ತಮಿಳು, ಮಲಯಾಳಂ, ಪಂಜಾಬಿ ಸೇರಿ 22 ಭಾಷೆಗಳನ್ನು ಸೇರಿಸಲಾಗಿದೆ. ದೇಶದಲ್ಲಿ 19,569 ತಾಯಿ ನುಡಿಗಳಿವೆ. ಈ ಭಾಷಾ ರಂಗೋಲಿಯಲ್ಲಿನ ಬಣ್ಣಗಳನ್ನು ಹಾಳು ಮಾಡದೆ, ಭಾಷೆಗಳ ಸೊಗಡು ಮತ್ತು ಶ್ರೀಮಂತಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ನಾಡಿನ ಎಲ್ಲೆಡೆ ಕನ್ನಡ ನಾಮಫಲಕಗಳು ಗೋಚರಿಸಬೇಕು. ಕನ್ನಡ ಭಾಷೆಯನ್ನು ಸಂರಕ್ಷಿಸಲು ಪ್ರಾಧಿಕಾರ ಎಲ್ಲರೊಟ್ಟಿಗೆ ಸೇರಿ ಕಾರ್ಯನಿರ್ವಹಿಸಲಿದೆ’ ಎಂದು ತಿಳಿಸಿದರು.

ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ. ಕೃಷ್ಣ, ‘ಕನ್ನಡ ಉಳಿಸಿ ಬೆಳೆಸುವ ಕಾರ್ಯ ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಕನ್ನಡ ಕೈಂಕರ್ಯದಲ್ಲಿ ಕೈ ಜೋಡಿಸಬೇಕು. ಗಾಂಧೀಜಿ, ವಿನೋಬಾ ಭಾವೆ, ಕುವೆಂಪು, ಬೇಂದ್ರೆ ಸೇರಿದಂತೆ ಹಲವು ಸಾಧಕರು ತಾಯ್ನಾಡ ಭಾಷೆಯಲ್ಲೇ ಕಲಿತು, ದೊಡ್ಡ ಸಾಧನೆ ಮಾಡಿದ್ದಾರೆ. ನಮ್ಮ ಹೃದಯದ ಭಾಷೆಯಾಗಿ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ ಎಲ್ಲರೂ ಸೇರಿ ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.