ADVERTISEMENT

ಪಾಪು ಸಮಾಧಿ ಜೀರ್ಣೋದ್ಧಾರ ಮಾಡಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 20:37 IST
Last Updated 6 ಆಗಸ್ಟ್ 2024, 20:37 IST
ಪಾಟೀಲ ಪುಟ್ಟಪ್ಪ
ಪಾಟೀಲ ಪುಟ್ಟಪ್ಪ   

ಬೆಂಗಳೂರು: ‘ಕನ್ನಡ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದ ಪಾಟೀಲ ಪುಟ್ಟಪ್ಪ ಅವರ ಸಮಾಧಿಯನ್ನು ಸರ್ಕಾರವು ಜೀರ್ಣೋದ್ಧಾರ ಮಾಡಿ, ಸೂಕ್ತ ರೀತಿಯಲ್ಲಿ ಗೌರವ ಸಲ್ಲಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಮನವಿ ಮಾಡಿದೆ.

ಹಾವೇರಿ ಜಿಲ್ಲೆಯ ಹಲಗೇರಿ ಗ್ರಾಮದಲ್ಲಿ ಇರುವ ಅವರ ಸಮಾಧಿ ಕಡೆಗಣಿಸಲ್ಪಟ್ಟು, ಸುಸ್ಥಿತಿಯಲ್ಲಿ ಇಲ್ಲದಿರುವುದಕ್ಕೆ ಪ್ರಾಧಿಕಾರ ವಿಷಾದ ವ್ಯಕ್ತಪಡಿಸಿದೆ. ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಹಾಗೂ ಹಾವೇರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. 

‘2020ರ ಮಾರ್ಚ್ 16ರಂದು ನಿಧನರಾದ ಅವರ ಸಮಾಧಿಯನ್ನು ಜೀರ್ಣೋದ್ಧಾರ ಮಾಡಬೇಕು. ‘ಕರ್ನಾಟಕ’ ಹೆಸರಿಗೆ 50 ವರ್ಷ ತುಂಬಿದ ಸಂದರ್ಭದಲ್ಲಿ ಸರ್ಕಾರ ಮಾಡುವ ಈ ಕೆಲಸವು ಕನ್ನಡ ಪರ ಹೋರಾಟಗಾರರೊಬ್ಬರಿಗೆ ನೀಡುವ ಅತ್ಯುಚ್ಚ ಗೌರವವಾಗುತ್ತದೆ’ ಎಂದು ಪತ್ರದಲ್ಲಿ ಪ್ರಾಧಿಕಾರ ಮನವಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.