ADVERTISEMENT

ವಸತಿ ನಿಲಯ|ಗಡಿನಾಡು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿ: ಸಚಿವರಿಗೆ ಬಿಳಿಮಲೆ ಪತ್ರ

ಸಚಿವರಿಗೆ ಪತ್ರ ಬರೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2024, 15:32 IST
Last Updated 12 ಸೆಪ್ಟೆಂಬರ್ 2024, 15:32 IST
ಪುರುಷೋತ್ತಮ ಬಿಳಿಮಲೆ
ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಹೊರನಾಡು ಹಾಗೂ ಗಡಿನಾಡು ವಿದ್ಯಾರ್ಥಿಗಳು, ಕರ್ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡಲು ಬಯಸಿದರೆ ಯಾವುದೇ ನಿರ್ಬಂಧ ವಿಧಿಸದೆ ಇಲ್ಲಿನ ಸರ್ಕಾರಿ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರಿಗೆ ಪತ್ರ ಬರೆದಿದ್ದಾರೆ.

‘ದೇಶದ ಯಾವುದೇ ಭಾಗದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ಅಭ್ಯರ್ಥಿಗಳಿಗೆ ರಾಜ್ಯದಲ್ಲಿ ಉನ್ನತ ವ್ಯಾಸಂಗಕ್ಕೆ ಸರ್ಕಾರವು ಮೀಸಲಾತಿ ಕಲ್ಪಿಸಿದೆ. ಅದರಂತೆ, ಇಲ್ಲಿ ತಮ್ಮ ವ್ಯಾಸಂಗ ಮುಂದುವರಿಸಲು ಬಯಸುವ ಗಡಿನಾಡು, ಹೊರನಾಡು ವಿದ್ಯಾರ್ಥಿಗಳಿಗೆ ಇಲಾಖೆಗಳ ವಿದ್ಯಾರ್ಥಿ ವಸತಿ ನಿಲಯಗಳಲ್ಲಿ ಅವಕಾಶ ಕಲ್ಪಿಸಬೇಕಿದೆ. ಆದರೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಗಡಿನಾಡು, ಹೊರನಾಡು ಕನ್ನಡಿಗರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನಿರಾಕರಣೆ ಮಾಡುತ್ತಿದ್ದು, ವಸತಿ ನಿಲಯ ಸೌಲಭ್ಯ ಒದಗಿಸುವಲ್ಲಿಯೂ ಹಿಂದೇಟು ಹಾಕುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಹೊರನಾಡು, ಗಡಿನಾಡು ಕನ್ನಡಿಗರು ನಮ್ಮ ನಾಡಿನ ಜೊತೆ ಭಾವನಾತ್ಮಕ ನಂಟನ್ನು ಹೊಂದಿದ್ದು, ಅಂತಹ ಕನ್ನಡ ಸಮುದಾಯದ ಭಾವನೆಯನ್ನು ನಾವು ಗೌರವಿಸಬೇಕಿದೆ. ಇಲಾಖೆಯ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ಆದೇಶಗಳನ್ನು ನೀಡುವ ಮೂಲಕ ಹೊರನಾಡು, ಗಡಿನಾಡು ಕನ್ನಡಿಗರ ಹಿತ ಕಾಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.