ADVERTISEMENT

ಶಾಲೆಗಳಿಗೆ ಮೂಲಸೌಕರ್ಯ ಒದಗಿಸಿ: ಸಚಿವ ಮಧು ಬಂಗಾರಪ್ಪಗೆ ಮನವಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 23:29 IST
Last Updated 5 ಜುಲೈ 2024, 23:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ‌ಶಾಲೆಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಮಾಡಿದೆ. 

ಈ ಬಗ್ಗೆ ಪ್ರಾಧಿಕಾರವು ಸಚಿವರಿಗೆ ಪತ್ರ ಬರೆದಿದೆ. ‘ರಾಜ್ಯದಲ್ಲಿರುವ ಹಲವು ಸರ್ಕಾರಿ ಶಾಲೆಗಳ ತರಗತಿ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಮಳೆಗಾಲದ ಈ ಹೊತ್ತಿನಲ್ಲಿ ‌ಕೆಲ ಶಾಲೆಗಳ ಕೊಠಡಿಗಳಲ್ಲಿ ಮಳೆ ನೀರು ಸೋರುತ್ತಿರುವುದರಿಂದ ಪಾಠ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಇಂತಹ ಶಾಲೆಗಳನ್ನು ಶಿಕ್ಷಣ ಇಲಾಖೆ ಕೂಡಲೇ ಗುರುತಿಸಿ, ಅವುಗಳ ದುರಸ್ತಿ ಕಾರ್ಯವನ್ನು ಕೈಗೊಳ್ಳಲು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಗೆ (ಎಸ್‌ಡಿಎಂಸಿ) ಅಗತ್ಯ ಹಣವನ್ನು ಆದಷ್ಟು ಶೀಘ್ರ ಬಿಡುಗಡೆಗೊಳಿಸಬೇಕು’ ಎಂದು ಕೋರಿಕೊಂಡಿದೆ.

‘ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ನೀಡಿರುವುದರಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸುವ ಶಿಕ್ಷಕರಿಗೆ ವಿಶೇಷವಾದ ತರಬೇತಿ ನೀಡಬೇಕಿದೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಶೂ ಮತ್ತು ಸಾಕ್ಸ್‌ಗಳಿಗೆ ಇಲ್ಲಿಯವರೆಗೂ ಅನುದಾನ ‌ಬಿಡುಗಡೆಯಾಗಿಲ್ಲ. ಇಲ್ಲಿಯವರೆಗೆ ಎಸ್.ಡಿ.ಎಂ.ಸಿ ನೇತೃತ್ವದಲ್ಲಿ ಇದರ ನಿರ್ವಹಣೆ ಆಗುತ್ತಿತ್ತು. ಐ.ಎಸ್‌.ಒ ಬ್ರಾಂಡ್‌ನ ಕಂಪನಿಯಿಂದಲೇ ಶೂ ಖರೀದಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆದರೆ, ಇದಕ್ಕೆ ಅಗತ್ಯವಿರುಷ್ಟ ಹಣ ಬಿಡುಗಡೆಯಾಗಿಲ್ಲ’ ಎಂದು ತಿಳಿಸಿದೆ. 

ADVERTISEMENT

‘ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನಿಗದಿಗೊಳಿಸಿರುವಂತೆ 200ರಿಂದ 220 ದಿನಗಳ ಬದಲು, ಕನಿಷ್ಠ 100 ದಿನಗಳು  ಪೂರ್ಣವಾಗಿ  ಪಾಠ  ಮಾಡಲು ಕೂಡ ಅಧ್ಯಾಪಕರಿಗೆ ಕಷ್ಟವಾಗುತ್ತದೆ. ಶಿಕ್ಷಕರು ಸಂಪೂರ್ಣ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಆಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಕೂಡಲೇ ಪರಿಹರಿಸಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಪತ್ರದಲ್ಲಿ ಮನವಿ ಮಾಡಿದೆ. 

ಸಮವಸ್ತ್ರ ಹೊಲಿಸಿಲ್ಲ

‘ಸರ್ಕಾರವು ಸಿದ್ಧ ಸಮವಸ್ತ್ರ ನೀಡುತ್ತಿದ್ದನ್ನು ನಿಲ್ಲಿಸಿದ್ದರಿಂದ ಸಾಕಷ್ಟು ತೊಂದರೆಯಾಗಿದೆ. ಸಮವಸ್ತ್ರ ನೀಡುವ ಬದಲು ಕೇವಲ ಬಟ್ಟೆ ನೀಡಲಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದಾಗಿ ಹಲವು ವಿದ್ಯಾರ್ಥಿಗಳು ಇನ್ನೂ ಸಮವಸ್ತ್ರ ಹೊಲಿಸಿಲ್ಲ. ಹೀಗಾಗಿ ಮಕ್ಕಳು ಸಮವಸ್ತ್ರವಿಲ್ಲದೆ ಶಾಲೆಗೆ ಬರುವಂತಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಖಾತೆಗೆ ಸರ್ಕಾರ ಹೊಲಿಗೆ ವೆಚ್ಚದ ಹಣ ಪಾವತಿಸಬೇಕು’ ಎಂದು ಪ್ರಾಧಿಕಾರವು ಸಚಿವರಿಗೆ ಮನವಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.