ADVERTISEMENT

ಬೆಂಗಳೂರು: ಕನ್ನಡ ಭಾಷಾ ಬೋಧನೆಗೆ ನಾಲ್ಕು ಗಂಟೆ ನಿಗದಿಪಡಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2024, 16:24 IST
Last Updated 26 ಜೂನ್ 2024, 16:24 IST
ಪುರುಷೋತ್ತಮ ಬಿಳಿಮಲೆ ಅವರು ಸಚಿವ ಎಂ.ಸಿ.ಸುಧಾಕರ್ ಅವರ ಜತೆಗೆ ಚರ್ಚಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಉಪಸ್ಥಿತರಿದ್ದರು. 
ಪುರುಷೋತ್ತಮ ಬಿಳಿಮಲೆ ಅವರು ಸಚಿವ ಎಂ.ಸಿ.ಸುಧಾಕರ್ ಅವರ ಜತೆಗೆ ಚರ್ಚಿಸಿದರು. ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ ಉಪಸ್ಥಿತರಿದ್ದರು.    

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿನ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕನ್ನಡ ಭಾಷೆ ಬೋಧನೆಯ ಅವಧಿಯನ್ನು ನಾಲ್ಕು ಗಂಟೆಗೆ ನಿಗದಿಗೊಳಿಸಿ ಆದೇಶ ಹೊರಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಲಾಖೆಗೆ ಮನವಿ ಮಾಡಿದೆ. 

ಈ ಬಗ್ಗೆ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಬುಧವಾರ ಭೇಟಿ ಮಾಡಿ, ಚರ್ಚಿಸಿದರು. 

ಪದವಿ ಕಾರ್ಯಕ್ರಮಗಳ ಅವಧಿ ಮತ್ತು ಪಠ್ಯಕ್ರಮವನ್ನು ಪರಿಷ್ಕರಿಸಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಕನ್ನಡ ಭಾಷಾ ಕಲಿಕೆಗೆ ಪ್ರತಿ ಸೆಮಿಸ್ಟರ್‌ಗೆ ಮೂರು ಗುಣಾಂಕಗಳನ್ನು (ಕ್ರೆಡಿಟ್) ನೀಡಲಾಗಿದೆ. ಆದರೆ, ಕನ್ನಡ ಭಾಷಾ ಪಠ್ಯ ಬೋಧನಾ ಅವಧಿಯ ಸ್ಪಷ್ಟತೆ ನೀಡಿಲ್ಲ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಪ್ರತಿ ಸೆಮಿಸ್ಟರ್‌ಗೆ ನಾಲ್ಕು ಗಂಟೆಗಳ ಬೋಧನಾ ಅವಧಿಯನ್ನು ನಿಗದಿ ಮಾಡಲಾಗಿದೆ. ಆದರೆ, ರಾಜ್ಯ ಶಿಕ್ಷಣ ನೀತಿಯಡಿ ಕೆಲವು ವಿಶ್ವವಿದ್ಯಾಲಯಗಳು ಬೋಧನಾ ಅವಧಿಯನ್ನು ಮೂರು ಗಂಟೆಗೆ ಇಳಿಸುವ ಮೂಲಕ ಕನ್ನಡಕ್ಕೆ ಅನ್ಯಾಯ ಮಾಡುತ್ತಿವೆ ಎಂದು ಬಿಳಿಮಲೆ ತಿಳಿಸಿದರು. 

ADVERTISEMENT

ರಾಜ್ಯದೊಳಗಿರುವ ಕೆಲವು ವಿಶ್ವವಿದ್ಯಾಲಯಗಳು ಮೊದಲ ಎರಡು ಸೆಮಿಸ್ಟರ್‌ಗಳಿಗೆ, ಅಂದರೆ ಒಂದು ವರ್ಷಕ್ಕೆ ಪಠ್ಯಕ್ರಮ ವಿನ್ಯಾಸಗೊಳಿಸಿ ಬೋಧನಾ ಅವಧಿ ನಿಗದಿಪಡಿಸಿವೆ. ಈ ಪ್ರಕಾರ ಕನ್ನಡ ಭಾಷಾ ಬೋಧನೆಯನ್ನು ಕೇವಲ ಮೂರು ಗಂಟೆಗಳನ್ನು ನಿಗದಿ ಮಾಡಿರುವುದು ಸರಿಯಾದ ಕ್ರಮವಲ್ಲ. ಇದು ನಾಲ್ಕು ಗಂಟೆಗಳ ಬೋಧನಾ ತರಗತಿಗಳಾಗಿ ಬದಲಾಗಬೇಕು ಎಂದು ಮನವಿ ಮಾಡಿದರು.

ಪಂಪ, ಬಸವ, ಕುವೆಂಪು ಮೊದಲಾದ ಲೇಖಕರು, ಕನ್ನಡ ನಾಡಿನ ಸಂಸ್ಕೃತಿ, ಭಾಷಾ ಸಂಸ್ಕೃತಿಯನ್ನು ವಿವರವಾಗಿ ಪರಿಚಯಿಸಲು ನಾಲ್ಕು ಗಂಟೆಗಳ ಬೋಧನೆ ಅಗತ್ಯ. ಆದ್ದರಿಂದ ನಾಲ್ಕು ಗಂಟೆಗಳ ಬೋಧನಾ ಅವಧಿಯನ್ನು ನಿಗದಿಗೊಳಿಸುವ ಸ್ಪಷ್ಟ ಆದೇಶವನ್ನು ಹೊರಡಿಸಬೇಕು ಎಂದು ಹೇಳಿದರು. 

ಪ್ರಾಧಿಕಾರದ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಎಂ.ಸಿ.ಸುಧಾಕರ್, ‘ಮೂರು ಗುಣಾಂಕಗಳಿಗೆ (ಕ್ರೆಡಿಟ್) ಮೂರು ಗಂಟೆಯ ತರಗತಿ ಮತ್ತು ಒಂದು ಗಂಟೆಯ ಮನೆ ಪಾಠ (ಟ್ಯೂಶನ್) ಸೇರಿ ಒಟ್ಟು ನಾಲ್ಕು ಗಂಟೆಗಳ ಅವಧಿಯನ್ನು ನಿಗದಿಪಡಿಸಿ ಕೂಡಲೇ ಆದೇಶ ಹೊರಡಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.