ಬೆಂಗಳೂರು: ‘ಕನ್ನಡಿಗರೇ ಕನ್ನಡ ಭಾಷೆಯ ಬಗ್ಗೆ ನಿರಾಸಕ್ತಿಯ ಮನೋಭಾವ ಹೊಂದಿದ್ದಾರೆ. ಇದರಿಂದಾಗಿ ಕನ್ನಡೇತರರು ನಾಡಿನಲ್ಲಿ ಯಜಮಾನ್ಯ ಸ್ಥಾಪಿಸಲು ಹೊರಟಿದ್ದಾರೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಬೇಸರ ವ್ಯಕ್ತಪಡಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ನಗರದಲ್ಲಿ ಬುಧವಾರ ಹಮ್ಮಿಕೊಂಡ ಕನ್ನಡೇತರರಿಗೆ ಕನ್ನಡ ಕಲಿಸುವ ಶಿಕ್ಷಕರ ತರಬೇತಿ ಶಿಬಿರ ಉದ್ಘಾಟಿಸಿ, ಮಾತನಾಡಿದರು.
‘ಕನ್ನಡಿಗರು ಉದಾರಿಗಳಷ್ಟೇ ಆಗಿರದೆ, ಉದಾಸೀನರೂ ಆಗಿದ್ದಾರೆ. ಹೊರ ರಾಜ್ಯಗಳಿಂದ, ಹೊರ ದೇಶಗಳಿಂದ ಈ ನಾಡಿಗೆ ಬಂದಂತಹ ಜನರಿಗೆ ಕನ್ನಡದ ಬಗ್ಗೆ ವಿಶೇಷ ಒಲವಿದೆ. ಆದರೆ, ಯಾವ ಬಗೆಯಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕಿತ್ತೋ ಆ ರೀತಿ ಕನ್ನಡ ಕಟ್ಟುವ ಕಾಯಕದಲ್ಲಿ ಕನ್ನಡಿಗರು ತಮ್ಮನ್ನು ತೊಡಗಿಸಿಕೊಂಡಿಲ್ಲ. ನಮ್ಮ ಈ ದೌರ್ಬಲ್ಯವನ್ನು ಕನ್ನಡೇತರರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಡದ ಭವ್ಯ ಪರಂಪರೆಗೆ ಉತ್ತರಾಧಿಕಾರಿಗಳನ್ನು ನಿರ್ಮಿಸಬೇಕು’ ಎಂದು ಹೇಳಿದರು.
‘ವಿದೇಶಿ ವಿದ್ವಾಂಸರು ಕನ್ನಡಕ್ಕೆ ಅನನ್ಯವಾದ ಕೊಡುಗೆ ನೀಡಿದ್ದಾರೆ. ಕನ್ನಡಿಗರಲ್ಲದ ಅವರು, ಎಲ್ಲ ಕಾಲಕ್ಕೂ ಸ್ಮರಣೀಯರು. ಆ ರೀತಿಯಲ್ಲಿ ಇಂದು ಕನ್ನಡೇತರರನ್ನು ನಾವು ರೂಪಿಸಬೇಕು’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ‘ಅಂತರರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಕನ್ನಡ ಭಾಷೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳಿದ್ದರೂ ಅವನ್ನು ನಮ್ಮ ಭಾಷೆಯ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಕನ್ನಡಕ್ಕೆ ಇನ್ನೂ ಸರಿಯಾದ ‘ಫಾಂಟ್’ ದೊರೆಯುತ್ತಿಲ್ಲ. ‘ಪಿಡಿಎಫ್’ ದಾಖಲೆಯನ್ನು ‘ವರ್ಲ್ಡ್ ಫೈಲ್’ಗೆ ಬದಲಾಯಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಡಿಸಿದರು.
‘ಅಂತರರಾಷ್ಟ್ರೀಯ ಮಟ್ಟದ 16 ವಿಶ್ವವಿದ್ಯಾಲಯಗಳಲ್ಲಿ ತಮಿಳು ಭಾಷೆಯನ್ನು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಆದರೆ, ಕನ್ನಡ ಭಾಷಾ ಅಧ್ಯಯನ ವಿಭಾಗ ಯಾವುದೇ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಇಲ್ಲ. ಕೇಂದ್ರ ಸರ್ಕಾರವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ ಹಲವು ವರ್ಷಗಳಾದರೂ ಅದು ರಾಜ್ಯ ಸರ್ಕಾರದ ಅಡಿಯಲ್ಲಿ ಬಂದಿಲ್ಲ. ದೇಶದಲ್ಲಿರುವ ಹಲವು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ತಮಿಳು ಭಾಷೆಯನ್ನು ಕಲಿಸಲಾಗುತ್ತದೆ. ಅದೇ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಕನ್ನಡದ ಅಧ್ಯಯನ ಪೀಠವಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.