ADVERTISEMENT

ರಾಜ್ಯ ಪೊಲೀಸ್ ಇಲಾಖೆಯ ಫಲಕಗಳಲ್ಲಿ ‘ಕನ್ನಡ ಮಾಯ’: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 15:55 IST
Last Updated 20 ನವೆಂಬರ್ 2024, 15:55 IST
<div class="paragraphs"><p><strong>ಪ್ರಾತಿನಿಧಿಕ ಚಿತ್ರ</strong></p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ‘ರಾಜ್ಯ ಪೊಲೀಸ್ ಇಲಾಖೆಯ ಫಲಕಗಳಲ್ಲಿ ಇಂಗ್ಲಿಷ್ ಬಳಕೆ ಹೆಚ್ಚಾಗಿದ್ದು, ಕನ್ನಡವನ್ನು ಸಂಪೂರ್ಣ ನಿರ್ಲಕ್ಷ್ಯಿಸಲಾಗಿದೆ’ ಎಂದು ಕನ್ನಡ ಗೆಳೆಯರ ಬಳಗ, ಕನ್ನಡ ಕ್ರಿಯಾ ಸಮಿತಿ ಮತ್ತು ಕರ್ನಾಟಕ ಕ್ರಾಂತಿರಂಗ ಸಂಸ್ಥೆಗಳು ಆರೋಪಿಸಿವೆ

‘80ರ ದಶಕದಲ್ಲಿ ವಿಧಾನಸೌಧಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಕನ್ನಡ ಬಳಕೆಯಾಗುತ್ತಿತ್ತು. ದಶಕದ ಹಿಂದೆ ಬೆಂಗಳೂರಿನಾದ್ಯಂತ ಕನ್ನಡದಲ್ಲಿ ಮಾತ್ರ ಸೂಚನಾ ಫಲಕಗಳು ಇರುತ್ತಿದ್ದವು. ಕರ್ನಾಟಕ ನಾಮಕರಣದ ಸುವರ್ಣಮಹೋತ್ಸವ ವರ್ಷದಲ್ಲಿ ನಡೆದಿರುವ ಈ ಅಪಚಾರಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಗೃಹ ಸಚಿವರು ಕ್ರಮ ಕೈಗೊಳ್ಳಬೇಕು’ ಎಂದು ಈ ಸಂಘಟನೆಗಳ ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

‘ರಾಜ್ಯದ ಬೇರೆ ಬೇರೆ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ. ಹೀಗಾಗಿ ರಾಜ್ಯದಾದ್ಯಂತ ಪೊಲೀಸ್ ಇಲಾಖೆಯಲ್ಲಿರುವ ಇಂಥ ಇಂಗ್ಲಿಷ್‌ ಫಲಕಗಳನ್ನು ಬದಲಿಸಿ, ರಾಜ್ಯ ಭಾಷಾ ಅಧಿನಿಯಮದ ಪ್ರಕಾರ ಶೇ 60ರಷ್ಟು ಮೊದಲು ಕನ್ನಡ ಬಳಸಿ, ನಂತರ ಇಂಗ್ಲಿಷ್ ಬಳಸಿದ ಫಲಕಗಳನ್ನು ಹಾಕುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಿನ ಕನ್ನಡ ಗೆಳೆಯರ ಬಳಗದ ಪ್ರಧಾನ ಕಾರ್ಯದರ್ಶಿ ರಾ.ನಂ.ಚಂದ್ರಶೇಖರ್, ಮೈಸೂರಿನ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ ಮತ್ತು ಬೆಂಗಳೂರಿನ ಕರ್ನಾಟಕ ಕ್ರಾಂತಿರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.