ಬೆಂಗಳೂರು:ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಕನ್ನಡ ಚಿತ್ರರಂಗದ ನಿರ್ಮಾಪಕರು ಬುಧವಾರಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದರು.
‘ಮಂಡಳಿ ಅಧಿಕಾರಿ ಶ್ರೀನಿವಾಸಪ್ಪ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಚಿತ್ರ ವೀಕ್ಷಿಸಿ ಪ್ರಮಾಣಪತ್ರ ಕೊಡಲು ಅನಗತ್ಯ ವಿಳಂಬ ಮಾಡುತ್ತಿದ್ದಾರೆ. ದೊಡ್ಡ ನಿರ್ಮಾಪಕರಿಗೆ ಯಾವುದೇ ರೀತಿ ತೊಂದರೆ ಕೊಡುವುದಿಲ್ಲ.ಹೊಸಬರಿಗೆ ಹೆಚ್ಚು ತೊಂದರೆ ಕೊಡುತ್ತಾರೆ. ಬಹುತೇಕ ಎಲ್ಲ ಸಿನಿಮಾಗಳಿಗೂ ‘ಎ’ ಪ್ರಮಾಣಪತ್ರ ಕೊಡುತ್ತಿದ್ದಾರೆ. ಇದರಿಂದ ಸಿನಿಮಾ ಬಿಡುಗಡೆ ಕಷ್ಟವಾಗಿ ನಿರ್ಮಾಪಕರಿಗೆ ನಷ್ಟವಾಗುತ್ತಿದೆ’ ಎಂದು ಆರೋಪಿಸಿದರು.
‘ಕೇಳಿದರೆ ನಾವು ನಿಯಮವನ್ನು ಪಾಲಿಸುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ‘ಎ’ ಪ್ರಮಾಣಪತ್ರ ಪಡೆದುಕೊಂಡಿರುವ ಎಷ್ಟೋ ಸಿನಿಮಾಗಳು ಮರುಪರಿಶೀಲನೆ ಅರ್ಜಿ ಸಲ್ಲಿಸಿ ದೆಹಲಿಯಲ್ಲಿ ‘ಯು/ಎ’, ‘ಯು’ ಪ್ರಮಾಣಪತ್ರಗಳನ್ನು ಪಡೆದುಕೊಂಡು ಬಂದಿರುವ ಉದಾಹರಣೆಗಳಿವೆ. ಹಾಗಾದರೆ ಅವರು ನಿಯಮ ಪಾಲಿಸುತ್ತಿಲ್ಲವೇ?’ ಎಂದು ನಿರ್ಮಾಪಕ ಸುಶೀಲ್ ಕುಮಾರ್ ಪ್ರಶ್ನಿಸಿದರು.
‘ಒಂದು ಸಿನಿಮಾವನ್ನು ಮಂಡಳಿಗೆ ತೋರಿಸಬೇಕು ಎಂದರೆ ₹60 ಸಾವಿರದಿಂದ ₹70 ಸಾವಿರ ಖರ್ಚಾಗುತ್ತದೆ. ಎರಡನೇ ಬಾರಿ ತೋರಿಸಬೇಕು ಎಂದರೆ ₹40 ಸಾವಿರದಿಂದ ₹50 ಸಾವಿರ ಖರ್ಚಾಗುತ್ತದೆ. ಇಷ್ಟು ಕಷ್ಟಪಟ್ಟು ಸಿನಿಮಾ ತೋರಿಸಿದರೂ ಮಂಡಳಿಯವರು ಸರಿಯಾಗಿ ಸಿನಿಮಾ ನೋಡದೆ ಮೊಬೈಲ್‌ನಲ್ಲಿ ಆಟವಾಡುತ್ತ ಕುಳಿತುಕೊಳ್ಳುತ್ತಾರೆ. ತೀರಾ ಕ್ಷುಲ್ಲಕ ಕಾರಣಗಳಿಗೂ ‘ಎ’ ಪ್ರಮಾಣಪತ್ರ ಕೊಡುತ್ತಾರೆ. ಹೀಗಾದರೆ ಚಿತ್ರರಂಗ ಬೆಳೆಯುವುದು ಹೇಗೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿ ಭಾ.ಮ. ಹರೀಶ್ ಮನವಿಪತ್ರಗಳನ್ನು ಸ್ವೀಕರಿಸಿದರು.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದಾಗ ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪ ದೂರವಾಣಿ ಕರೆಯನ್ನು ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.