ADVERTISEMENT

30ರಂದು ರಾಜಭವನ ಮುತ್ತಿಗೆಗೆ ಕರವೇ ನಿರ್ಧಾರ: ಟಿ.ಎ.ನಾರಾಯಣ ಗೌಡ

ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2021, 19:45 IST
Last Updated 23 ಡಿಸೆಂಬರ್ 2021, 19:45 IST
ಟಿ.ಎ.ನಾರಾಯಣ ಗೌಡ
ಟಿ.ಎ.ನಾರಾಯಣ ಗೌಡ   

ಬೆಂಗಳೂರು: ‘ಬೆಳಗಾವಿ ಮತ್ತು ಮಹಾರಾಷ್ಟ್ರದಲ್ಲಿ ಕನ್ನಡಿಗರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಇದೇ 30ರಂದು ರಾಜಭವನಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೇವೆ’ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯ ಘಟಕದ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ತಿಳಿಸಿದರು.

ಕ.ರ.ವೇ ರಾಜ್ಯ ಪದಾಧಿಕಾರಿಗಳ ಸಭೆಯ ಬಳಿಕ ಗುರುವಾರ ಅವರು ಮಾತನಾಡಿದರು.

‘ಕನ್ನಡ ನಾಡಿನ ವೀರ ಸೇನಾನಿಗಳಿಗೆ ಅವಮಾನ ಮಾಡಿರುವ ಎಂಇಎಸ್‌ ಹಾಗೂ ಶಿವಸೇನಾ ಕಾರ್ಯಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಈ ಕುರಿತು ಕೇಂದ್ರದ ಗಮನ ಸೆಳೆಯುವ ಉದ್ದೇಶದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಿಗದಿತ ದಿನದಂದು ಬಿಬಿಎಂಪಿ ಕೇಂದ್ರ ಕಚೇರಿಯಿಂದ ರಾಜಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಅದರಲ್ಲಿ ರಾಜ್ಯದ ವಿವಿಧ ಭಾಗಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಎಂಇಎಸ್‌ ಹಾಗೂ ಶಿವಸೇನಾವನ್ನು ನಿಷೇಧಿಸುವಂತೆ ರಾಜ್ಯಪಾಲರಿಗೆ ಒತ್ತಾಯಿಸಲಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಎಂಇಎಸ್ ಮತ್ತು ಶಿವಸೇನಾ ವಿರುದ್ಧ ಕಳೆದ ಎರಡು ದಶಕಗಳಿಂದಲೂ ನಾವು ಹೋರಾಟ ನಡೆಸುತ್ತಲೇ ಬಂದಿದ್ದೇವೆ. ಬೆಳಗಾವಿಯಲ್ಲಿ ಅವರ ಪುಂಡಾಟಿಕೆಗೂ ಕಡಿವಾಣ ಹಾಕಿದ್ದೇವೆ. ಈ ಸಂಘಟನೆಗಳು ರಾಜ್ಯದಿಂದ ಸಂಪೂರ್ಣವಾಗಿ ತೊಲಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ. ಇದರ ಮೊದಲ ಹೆಜ್ಜೆಯಾಗಿ ಇದೇ 28ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನಮ್ಮ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಆಗ್ರಹ ಪತ್ರ ಸಲ್ಲಿಸಲಾಗುತ್ತದೆ’ ಎಂದು ತಿಳಿಸಿದರು.

‘ಇದೇ 31ರಂದು ಕೆಲ ಕನ್ನಡಪರ ಸಂಘಟನೆಗಳು ‘ಕರ್ನಾಟಕ ಬಂದ್‌’ ನಡೆಸಲು ನಿರ್ಧರಿಸಿವೆ. ಅದಕ್ಕೆ ನಮ್ಮ ಬೆಂಬಲ ಇಲ್ಲ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬಂದ್‌ನಿಂದ ದೂರ ಉಳಿಯಲು ತೀರ್ಮಾನಿಸಿದ್ದೇನೆ. ನಮ್ಮ ನೆಲದಲ್ಲಿ ನಡೆದ ಎಂಇಎಸ್‌ ಗೂಂಡಾಗಿರಿಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಮಸಿ ಬಳಿದಿದ್ದಾರೆ ಎಂಬ ಕಾರಣಕ್ಕೆ ನಮ್ಮ ಸರ್ಕಾರವು ಕನ್ನಡಪರ ಸಂಘಟನೆಯೊಂದರ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿ ಅತಿರೇಕದಿಂದ ವರ್ತಿಸಿದೆ. ಯುವಕರನ್ನು ಕೂಡಲೇ ಬಿಡುಗಡೆಗೊಳಿಸಿ ಅವರ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.