ADVERTISEMENT

ಕನ್ನಡ ಶಾಲೆಗಳ ಕಡೆಗಣನೆ ಸಹಿಸಲಾಗದು: ಮಹೇಶ ಜೋಷಿ

ಪ್ರತಿಭಟನೆಯ ಎಚ್ಚರಿಕೆ ನೀಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 5:14 IST
Last Updated 24 ಸೆಪ್ಟೆಂಬರ್ 2022, 5:14 IST
ಮಹೇಶ ಜೋಶಿ
ಮಹೇಶ ಜೋಶಿ   

ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಲಿಂಗನಮಠ ಗ್ರಾಮದ ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅನುದಾನವಿಲ್ಲ ಎಂದು ಹೇಳಿರುವುದು ಆಕ್ಷೇಪಾರ್ಹ. ಕನ್ನಡ ಶಾಲೆಗಳ ಕಡೆಗಣನೆಯನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ‌ಮಹೇಶ ಜೋಶಿ ಎಚ್ಚರಿಕೆ ನೀಡಿದ್ದಾರೆ.

‘ಖಾನಾಪುರ ತಾಲ್ಲೂಕು ಗಡಿ ಪ್ರದೇಶದಲ್ಲಿದ್ದು, ಈ ಭಾಗದಲ್ಲಿ ಕನ್ನಡ ಕಟ್ಟುವ ಕಾರ್ಯ ಮಾಡಬೇಕಾದ ಅಧಿಕಾರಿಗಳು ಮನಸ್ಸಿಗೆ ಬಂದಂತೆ ವರ್ತನೆ ಮಾಡುತ್ತಿದ್ದಾರೆ. ಲಿಂಗನಮಠ ಗ್ರಾಮದಲ್ಲಿರುವ ಶಾಲೆಯ ಒಂದೇ ಆವರಣದಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಶಾಲೆಗಳಿವೆ. ಎರಡು ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಉರ್ದು ಶಾಲೆಯ ಕಟ್ಟಡ ದುರಸ್ತಿಗೆ ಒಪ್ಪಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕನ್ನಡ ಶಾಲೆಯ ಕಟ್ಟಡ ದುರಸ್ತಿಗೆ ಅನುದಾನ ಕೊರತೆ ಎಂದು ಹೇಳುತ್ತಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಉರ್ದು ಶಾಲೆಗೆ ನೀಡುತ್ತಿರುವ ಮನ್ನಣೆ, ಕನ್ನಡ ಶಾಲೆಗೆ ನೀಡದೇ ಇರುವುದು ಖಂಡನಾರ್ಹ. ತಕ್ಷಣ ದುರಸ್ತಿಗೆ ಮುಂದಾಗದಿದ್ದಲ್ಲಿ ಆ ಶಾಲೆಯ ಎದುರೇ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.