ADVERTISEMENT

ರಾಜ್ಯದಲ್ಲಿ ಎಂಇಎಸ್‌, ಶಿವಸೇನಾ ನಿಷೇಧಿಸಿ: ಪ್ರತಿಭಟನಾಕಾರರ ಆಗ್ರಹ

ಕರುನಾಡ ವಿಜಯಸೇನೆ ಕಾರ್ಯಕರ್ತರಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:39 IST
Last Updated 22 ಡಿಸೆಂಬರ್ 2021, 20:39 IST
ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ
ಕರುನಾಡ ವಿಜಯಸೇನೆ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿವಸೇನಾ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್‌) ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಕನ್ನಡ ಧ್ವಜ ಹಿಡಿದು ಮೈಸೂರು ಬ್ಯಾಂಕ್‌ ವೃತ್ತದಿಂದ ಮೆಜೆಸ್ಟಿಕ್‌ ಬಳಿಯ ಸಂಗೊಳ್ಳಿ ರಾಯಣ್ಣ ಪ್ರತಿಮೆವರೆಗೂ ಸಂಘಟನೆಯ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

‘ಶಿವಾಜಿ ಪ್ರತಿಮೆಗೆ ಮಸಿ ಬಳಿದ ವಿಚಾರವನ್ನು ಮಹಾರಾಷ್ಟ್ರದ ಸಂಸದರು ಹಾಗೂ ಕೇಂದ್ರ ಸಚಿವರು ಲೋಕಸಭೆಯಲ್ಲಿ ಪ್ರಸ್ತಾಪಿಸಿ ಅದರ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ರಾಜ್ಯದ ಸಂಸದರು, ಸಚಿವರು ಬಿಜೆಪಿ ವರಿಷ್ಠರಿಗೆ ಹೆದರಿ ಬಾಯಿಮುಚ್ಚಿ ಕುಳಿತಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಎಂಇಎಸ್‌ ನಿಷೇಧದ ಕುರಿತು ಬೆಳಗಾವಿ ಅಧಿವೇಶನದಲ್ಲೇ ನಿರ್ಣಯ ಕೈಗೊಳ್ಳಬೇಕು. ಶಿವಸೇನಾ ಮತ್ತು ಎಂಇಎಸ್‌ನ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು’ ಎಂದು ಕರುನಾಡ ವಿಜಯಸೇನೆಯ ಅಧ್ಯಕ್ಷ ಎಚ್‌.ಎನ್‌.ದೀಪಕ್‌ ಒತ್ತಾಯಿಸಿದರು.

‘ನಿಮಗೆ ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಕಿಂಚಿತ್ತೂ ಅಭಿಮಾನವಿಲ್ಲವೇ. ಅಧಿಕಾರಕ್ಕೋಸ್ಕರ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿದ್ದ ನಿಮ್ಮಿಂದ ನಾಡಿನ ರಕ್ಷಣೆ ಸಾಧ್ಯವೇ’ ಎಂದು ರಾಜಕಾರಣಿಗಳನ್ನು ಪ್ರಶ್ನಿಸಿದರು.

‘ಬೆಳಗಾವಿಯ ರಾಜಕಾರಣಿಗಳು ಮರಾಠಿಗರ ಗುಲಾಮರಂತೆ ವರ್ತಿಸುತ್ತಿದ್ದಾರೆ. ಘಟನೆಗೂ ತಮಗೂ ಸಂಬಂಧವೇ ಇಲ್ಲದವರ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೂ ನೋಡಿಕೊಂಡು ಸುಮ್ಮನಿದ್ದಾರೆ. ಇದನ್ನೆಲ್ಲಾ ನಾವು ಸಹಿಸಿಕೊಳ್ಳಲು ಸಿದ್ಧರಿಲ್ಲ. ನಾಡಿನ ನೆಲ, ಜಲ, ಭಾಷೆಯ ವಿಷಯದಲ್ಲಿ ಬೀದಿಗಿಳಿದು ಹೋರಾಡುತ್ತೇವೆ’ ಎಂದು ಹೇಳಿದರು.

ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು, ‘ಕಿಡಿಗೇಡಿಗಳ ವಿರುದ್ಧ ನಮ್ಮನ್ನು ಆಳುವವರು ಕ್ರಮ ಕೈಗೊಳ್ಳದಿದ್ದರೆ ರಾಜ್ಯವನ್ನೇ ಬಂದ್‌ ಮಾಡಿ ನಾವು ಶಕ್ತಿ ಪ್ರದರ್ಶಿಸಲಿದ್ದೇವೆ’ ಎಂದರು.

ವಿಜಯಸೇನೆಯ ಪದಾಧಿಕಾರಿಗಳಾದ ಆರ್.ಎಸ್.ಮಹೇಶ್, ಬಿ.ಮೋಹನ್ ಕುಮಾರ್, ಸಚ್ಚಿದಾನಂದ, ಎಸ್‌.ವಿಜಯಕುಮಾರ್, ಗಂಗರಾಜಮ್ಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.