ಬೆಂಗಳೂರು: ‘ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ಆಚರಿಸಲಾಗುತ್ತಿದೆ. ಈ 50 ವರ್ಷಗಳಲ್ಲಿ ಯಾವ ಸರ್ಕಾರವೂ ಕನ್ನಡದ ಬಗ್ಗೆ ನಿಜವಾದ ಕಾಳಜಿ ತೋರಿಸಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಟಿ.ಎಸ್. ನಾಗಾಭರಣ ಬೇಸರ ವ್ಯಕ್ತಪಡಿಸಿದರು.
ವೀರಲೋಕ ಪ್ರಕಾಶನ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಹೊತ್ತಿಗೆ ದಿಬ್ಬಣ’ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಪುಸ್ತಕ ಬಿಡುಗಡೆ ಮಾಡಿ, ಮಾತನಾಡಿದರು.
‘ಸಂವಿಧಾನದ ಅಡಿ 18 ರಾಷ್ಟ್ರ ಭಾಷೆಗಳು ಗುರುತಿಸಲ್ಪಟ್ಟಿದ್ದರೂ ಸಮಾನ ಸವಲತ್ತುಗಳು ಎಲ್ಲ ಭಾಷೆಗೆ ದೊರೆತಿಲ್ಲ. ಇಲ್ಲಿನ ಸರ್ಕಾರಗಳೂ ಭಾಷೆಗೆ ಸಂಬಂಧಿಸಿದಂತೆ ಆಳವಾಗಿ, ಗಟ್ಟಿಯಾಗಿ ನಿಲ್ಲುವ ಕನ್ನಡದ ಕೆಲಸಗಳನ್ನು ಮಾಡಿಲ್ಲ. ಜನರೇ ಸಾಹಿತ್ಯ, ಸಂಸ್ಕೃತಿ ಹಾಗೂ ಕನ್ನಡವನ್ನು ಕಟ್ಟಿದರು‘ ಎಂದು ಹೇಳಿದರು.
‘ಇವತ್ತು ಕನ್ನಡಿಗರು ಹಾಗೂ ಇಲ್ಲಿನ ಸಂಸ್ಕೃತಿ ಬೇರೆಯದೆ ಆದ ಸಮಸ್ಯೆಗಳನ್ನು ಎದುರಿಸುತ್ತಿವೆ. ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದಿಂದ ಭಾಷೆ, ಸಂಸ್ಕೃತಿ ಹಾಗೂ ಬದುಕು ಸವೆದು ಹೋಗುತ್ತದೆ. ಇದರಿಂದ ಇನ್ನೊಂದು ರೀತಿಯ ಜೀತಕ್ಕೆ ಒಳಗಾಗಬೇಕಾಗುತ್ತದೆ. ಹೀಗಾಗಿ, ಭವಿಷ್ಯದ ದೃಷ್ಟಿಯಿಂದ ತಂತ್ರಾಂಶದಲ್ಲಿ ಕನ್ನಡ ಬಳಕೆ ಸೇರಿ ವಿವಿಧ ಕನ್ನಡ ಪರ ಕೆಲಸಗಳಿಗೆ ಆದ್ಯತೆ ನೀಡಬೇಕು’ ಎಂದು ಅಭಿಪ್ರಾಯಪಟ್ಟರು.
ಸಾಹಿತಿ ಮೊಗಳ್ಳಿ ಗಣೇಶ್, ‘ಕನ್ನಡ ಭಾಷೆಯ ಸ್ಥಿತಿಗತಿಯ ಬಗ್ಗೆ ಭಯಪಡಬೇಕಾಗಿಲ್ಲ. ಭಾಷೆ ಒಂದು ಹೊಳೆಯಾಗಿದ್ದು, ನಿರಂತರ ಬದಲಾಗುತ್ತ ಇರುತ್ತದೆ’ ಎಂದರು.
ಪ್ಯಾಲೆಸ್ಟೀನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಪ್ರಸ್ತಾಪಿಸಿ, ಪ್ಯಾಲೆಸ್ಟೀನಿಯರ ಹತ್ಯೆಯ ಬಗ್ಗೆ ಬೇಸರ ವ್ಯಕ್ತಪಡಿ ಸಿದ ಸಾಹಿತಿ ಬೊಳುವಾರು ಮಹಮದ್ ಕುಂಞಿ, ‘ಇಸ್ರೇಲ್ ಸೈನಿಕರೇ ನೀವು ವೀರಾಧಿವೀರರು. ಯುದ್ಧದಲ್ಲಿ ನೀವು ಸಾವಿರಾರು ಮಕ್ಕಳನ್ನು ಕೊಲ್ಲದಿದ್ದರೆ ಅವರು 15–20 ವರ್ಷಗಳಲ್ಲಿ ಭಯೋತ್ಪಾದಕರಾಗುತ್ತಿದ್ದರು. ಏಕೆಂದರೆ ನಿಮ್ಮ ಪ್ರಕಾರ ಮುಸ್ಲಿಮರೆಲ್ಲ ಭಯೋತ್ಪಾದಕರು. ಆದ್ದರಿಂದ ಅವರು ಎಲ್ಲೆಲ್ಲಿ ಕಾಣುತ್ತಾರೊ ಅಲ್ಲಲ್ಲಿ ಕೊಂದು ಹಾಕಿ. ಮುಸ್ಲಿಮರು ಇಲ್ಲದೆ ಹೋದಾಗ ನಿಮಗೆ ಜಗತ್ತಿನಲ್ಲಿ ಶಾಂತಿ ಸಿಗುತ್ತದೆಯಲ್ಲವೇ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಪ್ಯಾಲೆಸ್ಟೀನ್ ಪರವಾಗಿ ಒಂದು ಸಭಾಂಗಣದಲ್ಲಿ ನಾಲ್ಕು ಮಾತನಾಡಲು ನಾವೇ ಆಯ್ಕೆ ಮಾಡಿದ ರಾಜ್ಯ ಸರ್ಕಾರ ಅವಕಾಶ ನೀಡಲಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
11 ಪುಸ್ತಕಗಳು ಬಿಡುಗಡೆ
ಡಿ.ಎಸ್. ಚೌಗಲೆ ಅವರ ‘ಜನಮಿತ್ರ ಅರಸು’ ಕೌಂಡಿನ್ಯ ನಾಗೇಶ್ ಅವರ ‘ವೀರ ಸಿಂಧೂರ ಲಕ್ಷ್ಮಣ’ ಅಬ್ದುಲ್ ರಶೀದ್ ಅವರ ‘ಹೂವಿನಕೊಲ್ಲಿ’ ಡಿ.ಎಸ್. ಶ್ರೀನಿವಾಸ್ ಪ್ರಸಾದ್ ಅವರ ‘ಸಹಭಾಷಿಕರ ಕನ್ನಡ ಪ್ರೇಮ’ ವಿಕ್ರಮ ಹತ್ವಾರ್ ಅವರ ‘ಕಾಗೆ ಮೇಷ್ಟ್ರು’ ಸುಧಾ ಆಡುಕಳ ಅವರ ‘ನೀಲಿ ಮತ್ತು ಸೇಬು’ ರವೀಂದ್ರ ವೆಂಶಿ ಅವರ ‘ಚಿತ್ರ ವಿಚಿತ್ರ’ ಲಕ್ಷ್ಮಣ ಕೌಂಟೆ ಅವರ ‘ಅಮೋಘವರ್ಷ’ ಗೀತಾ ಸುನೀಲ್ ಕಶ್ಯಪ್ ಅವರ ‘ಕನಸುಗಳ ಶ್ರಾದ್ಧ’ ಜಯರಾಮಾಚಾರಿ ಅವರ ‘ಹಂಸಾಕ್ಷರ’ ಹಾಗೂ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ನದಿಯೊಂದು ಕಡಲ ಹುಡುಕುತ್ತಾ’ ಪುಸ್ತಕ ಬಿಡುಗಡೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.