ADVERTISEMENT

ಕನ್ನಡಿಗರು ಸದಾ ಜಾಗೃತರಾಗಿರಬೇಕು: ಕವಿ ದೊಡ್ಡರಂಗೇಗೌಡ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2023, 15:17 IST
Last Updated 13 ಆಗಸ್ಟ್ 2023, 15:17 IST
ಗಿಡಕ್ಕೆ ನೀರೆರೆಯುವ ಮೂಲಕ ದೊಡ್ಡರಂಗೇಗೌಡ ಅವರು ಕಮ್ಮಟ ಉದ್ಘಾಟಿಸಿದರು. ಎಲ್.ಎನ್. ಮುಕುಂದರಾಜ್, ‌ಎಂ. ಪ್ರಕಾಶಮೂರ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಇದ್ದಾರೆ –ಪ್ರಜಾವಾಣಿ ಚಿತ್ರ 
ಗಿಡಕ್ಕೆ ನೀರೆರೆಯುವ ಮೂಲಕ ದೊಡ್ಡರಂಗೇಗೌಡ ಅವರು ಕಮ್ಮಟ ಉದ್ಘಾಟಿಸಿದರು. ಎಲ್.ಎನ್. ಮುಕುಂದರಾಜ್, ‌ಎಂ. ಪ್ರಕಾಶಮೂರ್ತಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಇದ್ದಾರೆ –ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ಕಾಲದಿಂದ ಕಾಲಕ್ಕೆ ನಾಡು–ನುಡಿಗೆ ಸಂಬಂಧಿಸಿದ ಸಮಸ್ಯೆಗಳು ಬದಲಾಗುತ್ತಾ ಇರುತ್ತವೆ. ಆದ್ದರಿಂದ, ಕನ್ನಡಿಗರು ಸದಾ ಜಾಗೃತರಾಗಿರಬೇಕು’ ಎಂದು ಕವಿ ದೊಡ್ಡರಂಗೇಗೌಡ ಹೇಳಿದರು. 

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದಲ್ಲಿ ಭಾನುವಾರ ಆಯೋಜಿಸಿದ ಕನ್ನಡ ಕಾರ್ಯಕರ್ತರ ಕಮ್ಮಟ ಉದ್ಘಾಟಿಸಿ, ಮಾತನಾಡಿದರು. ‘ಪ್ರತಿಯೊಂದು ಭಾಷೆಯಲ್ಲಿಯೂ ಕಾಲ ಕಾಲಕ್ಕೆ ಅನೇಕ ಸಮಸ್ಯೆಗಳು ತಲೆದೋರುತ್ತಿರುತ್ತವೆ. ಅಂತಹ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪರಿಹಾರ ಕಂಡುಕೊಳ್ಳಬೇಕು. ನಾಡು–ನುಡಿಯ ಉಳಿವಿಗಾಗಿ ಅನಿವಾರ್ಯವಾದರೆ ಹೋರಾಟವನ್ನೂ ಮಾಡಬೇಕು. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಮ್ಮಟಗಳು ಎಲ್ಲೆಡೆ ನಡೆಯಬೇಕು’ ಎಂದು ತಿಳಿಸಿದರು. 

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಪ್ರಕಾಶಮೂರ್ತಿ, ‘ನಾಡು–ನುಡಿಯ ಇತಿಹಾಸವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸವಾಗಬೇಕು. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ, ವರ್ಗಾಯಿಸಬೇಕಾದ ಜವಾಬ್ದಾರಿ ಕನ್ನಡಿಗರ ಮೇಲಿದೆ. ‌ಭಾಷೆ ಎದುರಿಸುತ್ತಿರುವ ಸಂಕಷ್ಟ ಹಾಗೂ ಸವಾಲುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು ಈ ಕಮ್ಮಟದ ಉದ್ದೇಶ’ ಎಂದು ಹೇಳಿದರು. 

ADVERTISEMENT

ಕಮ್ಮಟದಲ್ಲಿ ‘ಕನ್ನಡ ಸಾಹಿತ್ಯಿಕ-ಸಾಂಸ್ಕೃತಿಕ ಹಿರಿಮೆ’ ವಿಷಯದ ಬಗ್ಗೆ ಕವಿ ಎಲ್.ಎನ್. ಮುಕುಂದರಾಜ್, ‘ಕನ್ನಡಕ್ಕಾಗಿ ಸಾಮಾನ್ಯ ಕನ್ನಡಿಗರ ಕರ್ತವ್ಯಗಳು’ ವಿಷಯದ ಬಗ್ಗೆ ಕನ್ನಡಪರ ಚಿಂತಕ ಅರುಣ್ ಜಾವಗಲ್, ‘ಸಿನಿಮಾ ಮತ್ತು ಸಾಹಿತ್ಯದಲ್ಲಿ ಕನ್ನಡದ ಕಾಯಕ ಮಾರ್ಗ’ ವಿಷಯದ ಬಗ್ಗೆ ಚಲನಚಿತ್ರ ನಿರ್ದೇಶಕ ಕೆ.ಎಂ. ಚೈತನ್ಯ ಹಾಗೂ ‘ಕನ್ನಡ ನಾಡು-ನುಡಿ ಸಂಸ್ಕೃತಿಗಳ ಬೆಳವಣಿಗೆಯಲ್ಲಿ ಮಹಿಳೆಯರ ಪಾತ್ರ’ ವಿಷಯದ ಬಗ್ಗೆ ಪೂರ್ಣಿಮಾ ಎಸ್. ಅವರು ಮಾತನಾಡಿದರು.

ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಎಲ್. ಹರ್ಷ, ‌ಹಂ.ಗು. ರಾಜೇಶ್, ಎ.ಎಸ್. ನಾಗರಾಜಸ್ವಾಮಿ, ವಿಜಯಲಕ್ಷ್ಮಿ ಸತ್ಯಮೂರ್ತಿ, ಎಸ್. ತಿಮ್ಮಯ್ಯ, ನಾಗೇಶ್, ಆದೂರ್ ಪ್ರಕಾಶ್, ವೀರಭದ್ರಪ್ಪ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.