ADVERTISEMENT

ಚುನಾವಣೆ ಎದುರಿಸಲು ಸಿದ್ದ: ಮುಕುಂದರಾಜ್ ಸವಾಲು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 23:04 IST
Last Updated 25 ಅಕ್ಟೋಬರ್ 2024, 23:04 IST
<div class="paragraphs"><p>- ಪ್ರಜಾವಾಣಿ ಚಿತ್ರ</p></div>
   

- ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸಲಿ, ನಾನು ಅಕಾಡೆಮಿಗೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಸವಾಲು ಹಾಕಿದರು.

ಸಂಸ ಥಿಯೇಟರ್‌, ಕರ್ನಾಟಕ ಲೇಖಕಿಯರ ಸಂಘ ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ‘ಕೆ.ಎನ್.ವಿಜಯಲಕ್ಷ್ಮಿ ಅವರ ಸ್ಮರಣಾರ್ಥ ನಡೆದ ಅನುವಾದ ಕಾವ್ಯ ಕಮ್ಮಟ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ’ದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಮಂಡ್ಯದಲ್ಲಿ ಮಾತನಾಡಿದ ಕಸಾಪ ಅಧ್ಯಕ್ಷ ಮಹೇಶ್ ಜೋಶಿ, ‘ನಾನು ಸರ್ಕಾರದಿಂದ ನಾಮ ನಿರ್ದೇಶನಗೊಂಡವನಲ್ಲ. ಚುನಾವಣೆ ಎದುರಿಸಿ ಗೆದ್ದವನು. ಮುಕುಂದರಾಜ್ ಅವರು ಚುನಾವಣೆ ಎದುರಿಸಿ ಗೆಲ್ಲಲಿ’ ಎಂದು ಸವಾಲು ಹಾಕಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಕುಂದರಾಜ್, ‘ಜೋಶಿ ಅವರ ಸವಾಲನ್ನು ಸ್ವೀಕರಿಸಿದ್ದೇನೆ. ಅವರು ಈಗಲೇ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಬೇಕು. ನಾನೂ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧಿಸುತ್ತೇನೆ’ ಎಂದು ಹೇಳಿದರು.

‘ಅನುವಾದಕರು, ಕನ್ನಡ ಭಾಷೆ, ಸಂಸ್ಕೃತಿಗೆ ಹೊಂದುವಂತೆ ಅನುವಾದ ಮಾಡಬೇಕು. ಕನ್ನಡದ ಸಾಹಿತ್ಯದ ಕೃತಿಗಳು ಬೇರೆ ಭಾಷೆಯಲ್ಲಿ ಲಭ್ಯವಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್‌.ಎಲ್‌.ಪುಷ್ಪ ಮಾತನಾಡಿ, ‘ಕನ್ನಡ ಸಾಹಿತ್ಯಕ್ಕೆ ಹೊಸತನದ ಪರಿಚಯವಾದದ್ದು ಅನುವಾದದ ಮೂಲಕ. ಅನುವಾದದ ಮೂಲಕವೇ ಬೇರೆ ಬೇರೆ ದೇಶಗಳ ಸ್ತ್ರೀ ಚಿಂತನೆಗಳನ್ನು ತಿಳಿದುಕೊಳ್ಳಲು ಸಾಧ್ಯವಾದದ್ದು’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪಕಟ್ಟಿ ‘ಅನುವಾದ ಮೂಲ ಭಾಷೆಯ ಘಮವನ್ನು ಬಿಟ್ಟುಕೊಡಬಾರದು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಲೇಖಕ ಶೂದ್ರ ಶ್ರೀನಿವಾಸ್, ಅನುವಾದಕ ಲಕ್ಷ್ಮೀಪತಿ ಸೊಂದಲಗೆರೆ, ಕಮ್ಮಟದ ನಿರ್ದೇಶಕಿ ಪ್ರೊ. ಷಾಕಿರಾ ಖಾನಮ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.