ADVERTISEMENT

ರಾಜಕೀಯ ಪ್ರವೇಶಕ್ಕೆ ವಾತಾವರಣ ಪೂರಕವಾಗಿಲ್ಲ: ಶಂಕರ್‌ ಬಿದರಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2023, 16:22 IST
Last Updated 16 ಡಿಸೆಂಬರ್ 2023, 16:22 IST
ಕಾರ್ಯಕ್ರಮದಲ್ಲಿ ಶಂಕರ ಬಿದರಿ ಮಾತನಾಡಿದರು. ಮಹೇಶ ಜೋಶಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶಂಕರ ಬಿದರಿ ಮಾತನಾಡಿದರು. ಮಹೇಶ ಜೋಶಿ ಭಾಗವಹಿಸಿದ್ದಾರೆ.   

ಬೆಂಗಳೂರು: ‘ರಾಜಕೀಯ ಪ್ರವೇಶದ ಅಭಿಲಾಷೆ ಇದ್ದರೂ ವಾತಾವರಣ ಅದಕ್ಕೆ ಪೂರಕವಾಗಿಲ್ಲ. ಸದಾ ಜನಸಂಪರ್ಕವನ್ನು ಇಟ್ಟುಕೊಂಡು ಸಮಾಜಕ್ಕೆ ಒಳಿತನ್ನು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇನೆ’ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಶಂಕರ್‌ ಬಿದರಿ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ನಗರದಲ್ಲಿ ಶನಿವಾರ ಹಮ್ಮಿಕೊಂಡ ‘ಕನ್ನಡದ ಧ್ರುವತಾರೆ’ ಸಾಧಕರೊಂದಿಗೆ ಮಾತು–ಕತೆ ಕಾರ್ಯಕ್ರಮದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. 

‘ಸಾಮಾಜಿಕ ಕಾನೂನುಗಳು ಪರಿಣಾಮಕಾರಿಯಾಗಿ ಜಾರಿಗೆ ಬರಲು ಸಮಾಜ ಜಾಗೃತವಾಗಬೇಕು. ಬದಲಾವಣೆಯು ಹೆದರಿಕೆ ಬೆದರಿಕೆಯಿಂದ ಆಗುವುದಿಲ್ಲ. ಬದಲಾಗಿ, ದಾರ್ಶನಿಕರಿಂದ ಆಗುತ್ತದೆ. ಪೊಲೀಸ್ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ಸಮಷ್ಟಿಯಾಗಿ ಗ್ರಹಿಸಬೇಕು. ನಾನು ಎಂದಿಗೂ ರಾಜಕಾರಣಿಗಳ ಋಣದಲ್ಲಿ ಇರಲಿಲ್ಲ’ ಎಂದು ಹೇಳಿದರು. 

ADVERTISEMENT

ವೀರಪ್ಪನ್ ಪ್ರಕರಣದ ಬಗ್ಗೆ ವಿವರಿಸಿದ ಅವರು, ಗಂಧದ ಕಳ್ಳನಾದ ಆತ ದಂತ ಕಳ್ಳನಾಗಿ ಹಾಗೂ ಅಪಹರಣಕಾರನಾಗಿ ಬೆಳೆದ ಪರಿಯನ್ನು ತಿಳಿಸಿದರು. 200ರಷ್ಟಿದ್ದ ವೀರಪ್ಪನ್ ತಂಡ, ಐದಕ್ಕೆ ಇಳಿಸಿದ ಪರಿಯನ್ನು ಹಂಚಿಕೊಂಡರು. 

ಕಸಾಪ ಅಧ್ಯಕ್ಷ ಮಹೇಶ ಜೋಶಿ, ‘ಬುದ್ಧಿ ಬಲ ಮತ್ತು ದೈವ ಬಲದಿಂದ ಶಂಕರ ಬಿದರಿಯವರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಸರಳತೆ ಮತ್ತು ದಕ್ಷತೆಗೆ ಹೆಸರಾಗಿದ್ದ ಅವರು, ಜೀವನದಲ್ಲಿ ಎದುರಾದ ಸವಾಲುಗಳನ್ನು ಮೆಟ್ಟಿನಿಂತು ಮಾದರಿಯಾಗಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಕಸಾಪ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ, ಪದ್ಮಿನಿ ನಾಗರಾಜು ಹಾಗೂ ಕೋಶಾಧ್ಯಕ್ಷ ಪಟೇಲ್ ಪಾಂಡು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.