ಬೆಂಗಳೂರು: ‘ಕರ್ನಾಟಕ’ ನಾಮಕರಣದ ಸುವರ್ಣ ವರ್ಷಾಚರಣೆ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ‘ಸುವರ್ಣ ಕರ್ನಾಟಕ ಪರಿಷತ್ತಿನ ಪುರಸ್ಕಾರ’ ನೀಡಲು ನಿರ್ಧರಿಸಿದ್ದು, ಕರ್ನಾಟಕದ ಏಕೀಕರಣಕ್ಕೆ, ಕನ್ನಡ-ಕರ್ನಾಟಕ-ಕನ್ನಡಿಗರ ಏಳ್ಗೆಗೆ ಎಲೆಮರೆಯ ಕಾಯಿಯಂತೆ ಕೊಡುಗೆ ನೀಡಿದ ವ್ಯಕ್ತಿಗಳು ಹಾಗೂ ಸಂಘ–ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.
ಈ ಪುರಸ್ಕಾರದಡಿ ಐವತ್ತು ಮಹತ್ವದ ಪ್ರಶಸ್ತಿಗಳನ್ನು ನೀಡಲು ಪರಿಷತ್ತು ನಿರ್ಧರಿಸಿದೆ. ಅರ್ಜಿ ಸಲ್ಲಿಸಲು ಮುಜುಗರವಾದರೆ, ಅವರ ಸೇವೆಯನ್ನು ನಿಕಟವಾಗಿ ಬಲ್ಲ ವ್ಯಕ್ತಿಗಳು ಅಥವಾ ಸಂಘ–ಸಂಸ್ಥೆಗಳು ಅರ್ಜಿ ಸಲ್ಲಿಸಬಹುದು. ಪ್ರಶಸ್ತಿ ಆಯ್ಕೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಪಾರದರ್ಶಕವಾಗಿ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡಲಾಗುವುದು ಎಂದು ಕಸಾಪ ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.
‘ಕನ್ನಡದ ಮಠ’ ಎಂದೇ ಹೆಸರಾಗಿರುವ ಭಾಲ್ಕಿ ಮಠದಲ್ಲಿ ಏಪ್ರಿಲ್‌ನಲ್ಲಿ ನಡೆಯುವ ಜಾತ್ರೋತ್ಸವ ಸಮಾರಂಭದಲ್ಲಿ, ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಅರ್ಜಿ ನಮೂನೆಗಳು ಪರಿಷತ್ತಿನ ಕೇಂದ್ರ ಕಚೇರಿ ಹಾಗೂ ಜಾಲತಾಣ kannadasahithyaparishattu.inನಲ್ಲಿ ದೊರೆಯಲಿವೆ. ಸೂಕ್ತ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಈ ವಿಳಾಸಕ್ಕೆ ಮಾರ್ಚ್ 31ರೊಳಗೆ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.