ADVERTISEMENT

ಸಹಬಾಳ್ವೆ, ಸಮಾನತೆಯ ಭಾವ ಬೆಳೆಸಿಕೊಳ್ಳಿ: ನಿಡುಮಾಮಿಡಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:00 IST
Last Updated 10 ನವೆಂಬರ್ 2024, 16:00 IST
   

ಬೆಂಗಳೂರು: ‘ಮಾನವನ ಪ್ರಜ್ಞೆ ಜಾಗೃತವಾಗಬೇಕು. ಎಲ್ಲರೂ ಸಹಬಾಳ್ವೆ, ಸಮಾನತೆಯ ಭಾವ ಬೆಳೆಸಿಕೊಳ್ಳಬೇಕು’ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿದರು.

ಭಾನುವಾರ ನಡೆದ ಕನ್ನಡ ಸಂಘರ್ಷ ಸಮಿತಿಯ 46ನೇ ಸಂಸ್ಥಾಪನಾ ದಿನಾಚರಣೆ ಉದ್ಘಾಟಸಿ, ಮಹೇಶ್ ಊಗಿನಹಳ್ಳಿ ಅವರಿಗೆ ‘ಕನ್ನಡ ಕಟ್ಟಾಳು’ ಹಾಗೂ ಎಂ.ಬಿ. ವಿಜಯಲಕ್ಷ್ಮಿ ಅವರಿಗೆ ‘ನಿಸ್ಸೀಮ ಕನ್ನಡತಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಬಹುತ್ವ ವಿಚಾರ ವಿಸ್ತಾರವಾಗುತ್ತಿದೆ. ಕನ್ನಡ ನಾಡಿನಲ್ಲಿ ಬಹಳ ಹಿಂದಿನಿಂದಲೂ ಈ ಆಲೋಚನಾ ಕ್ರಮ ಇದೆ. ಇತ್ತೀಚೆಗೆ ರಾಜಕೀಯ ಕಾರಣದಿಂದಾಗಿ ಸಹಬಾಳ್ವೆ, ಸಮಾನತೆಗೆ ಹೆಚ್ಚು ಧಕ್ಕೆ ಉಂಟಾಗುತ್ತಿದೆ’ ಎಂದು ವಿಷಾದಿಸಿದರು.

ADVERTISEMENT

‘ನಾನೇ ಶ್ರೇಷ್ಠ ಎಂಬ ಆಲೋಚನಾ ಕ್ರಮವನ್ನು ಮೀರಿ, ಎಲ್ಲರೂ ಸಮಾನರು ಎಂಬ ಆಲೋಚನಾ ಕ್ರಮದಿಂದ ಬದುಕಬೇಕು. ಆಗ ಬದುಕು ಸಾರ್ಥಕವಾಗುತ್ತದೆ. ಬಸವಣ್ಣ, ಪಂಪ ಅವರ ಆಲೋಚನೆಯಲ್ಲಿ ವಿಶ್ವಪ್ರಜ್ಙೆ ಕಾಣುತ್ತದೆ. ಅದರಿಂದಾಗಿಯೆ ಅವರು ಆದರ್ಶವಾಗುತ್ತಾರೆ’ ಎಂದು ಅಭಿಪ್ರಾಯಪಟ್ಟರು.

ಲೇಖಕಿ ಜಯಲಕ್ಷ್ಮಿ ಪಾಟೀಲ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ‘ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರ ಸ್ಥಾನ ದೊರೆಯಬೇಕು. ಬೇರೆ ಭಾಷೆಯನ್ನು ದ್ವೇಷಿಸುವ ಅಗತ್ಯವಿಲ್ಲ. ಅಂತೆಯೇ ಮಾತೃ ಭಾಷೆಯನ್ನು ಕಡೆಗಣಿಸಬಾರದು. ಹಿಂದಿ ಹೇರಿಕೆಯ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಮತ್ತೊಮ್ಮೆ ಗೋಕಾಕ್ ಚಳುವಳಿಯಂತಹ ಹೋರಾಟಕ್ಕೆ ಸಿದ್ಧರಾಗಬೇಕೆನಿಸುತ್ತದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.