ADVERTISEMENT

ಪಾಲಿಕೆ ಸೇರಲು ನಿರಂತರ ಹೋರಾಟ ನಡೆಸುತ್ತಿರುವ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ

ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿರುವ ಕಾನ್ಷಿರಾಮ್‌ನಗರ, ಲಕ್ಷ್ಮೀಪುರ

ವಿಜಯಕುಮಾರ್ ಎಸ್.ಕೆ.
Published 1 ನವೆಂಬರ್ 2020, 18:52 IST
Last Updated 1 ನವೆಂಬರ್ 2020, 18:52 IST
ಅಭಿವೃದ್ಧಿಯಾಗದ ರಸ್ತೆಯ ಎರಡೂ ಬದಿ ಬಿದ್ದಿರುವ ನಿವೇಶನಗಳ ಅವಶೇಷ
ಅಭಿವೃದ್ಧಿಯಾಗದ ರಸ್ತೆಯ ಎರಡೂ ಬದಿ ಬಿದ್ದಿರುವ ನಿವೇಶನಗಳ ಅವಶೇಷ   

ಬೆಂಗಳೂರು: ವಿಧಾನಸೌಧದಿಂದ 13 ಕಿಲೋ ಮೀಟರ್‌ಗಳಷ್ಟು ದೂರದಲ್ಲಿ ರುವ ಬಡಾವಣೆಗಳಿವು. ಇಲ್ಲಿ 4 ಸಾವಿರಕ್ಕೂ ಅಧಿಕ ಮನೆಗಳಿವೆ. ಆದರೂ ಸಮರ್ಪಕ ರಸ್ತೆಗಳಿಲ್ಲ, ಕಸ ವಿಲೇವಾರಿ ವ್ಯವಸ್ಥೆಗಳಿಲ್ಲ, ಮಳೆ ನೀರು ಹರಿಯುವ ಚರಂಡಿಗಳಂತೂ ಇಲ್ಲವೇ ಇಲ್ಲ...

ಇದು ಸಿಲಿಕಾನ್‌ ಸಿಟಿಯ ದಾಸರ ಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್ಷಿರಾಮ್‌ ನಗರ ಮತ್ತು ಲಕ್ಷ್ಮೀಪುರ ಬಡಾವಣೆಗಳ ದುಃಸ್ಥಿತಿ. ಸುತ್ತಮುತ್ತಲೂ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರದೇಶಗಳಿವೆ. ನಡುವೆ ಇರುವ ಈ ಬಡಾವಣೆಗಳು ಮಾತ್ರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ. ಅಧಿಕಾರಿಗಳು ಮಾಡಿದ ಸಣ್ಣ ತಪ್ಪಿನಿಂದಾಗಿ 4 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆಸಿರುವ ಈ ಪ್ರದೇಶವೀಗ ನಾಗರಿಕ ಸೌಲಭ್ಯಗಳಿಂದ ವಂಚಿತವಾಗಿದೆ. ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲು 13 ವರ್ಷಗಳಿಂದ ಹೋರಾಟ ನಡೆಯುತ್ತಲೇ ಇದೆ.

ಬಿಬಿಎಂಪಿ ವ್ಯಾಪ್ತಿಗೆ 2007ರಲ್ಲಿ 7 ನಗರಸಭೆ, ಒಂದು ಪ‍ಟ್ಟಣ ಪಂಚಾಯಿತಿ ಮತ್ತು 110 ಹಳ್ಳಿಗಳು ಸೇರ್ಪಡೆಯಾದವು. ಆ ಪಟ್ಟಿಯಲ್ಲಿ ಕಾನ್ಷಿರಾಮ್ ನಗರವೂ ಇತ್ತು. ಆಸ್ತಿ ವಹಿ ಮತ್ತು ಇನ್ನಿತರ ದಾಖಲೆಗಳು ಗ್ರಾಮ ಪಂಚಾಯಿತಿಯಿಂದ ಪಾಲಿಕೆಗೆ ಹಸ್ತಾಂತರವಾಗದ ತಾಂತ್ರಿಕ ಕಾರಣಕ್ಕೆ ಸೇರ್ಪಡೆ ವಿಳಂಬವಾಯಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 2015ರ ಆಗಸ್ಟ್‌ 31ರಲ್ಲಿ ಈ ಬಡಾವಣೆಗಳು ಪಾಲಿಕೆಯ 11ನೇ ವಾರ್ಡ್‌ (ಕುವೆಂಪುನಗರ) ವ್ಯಾಪ್ತಿಗೆ ಸೇರ್ಪಡೆಗೊಂಡವು.

ADVERTISEMENT

ಆದರೆ, ಈ ವಿಂಗಡಣೆ ಅವೈಜ್ಞಾನಿಕ ವಾಗಿ ಆದ ಕಾರಣ ಹಲವು ತಾಂತ್ರಿಕ ಸಮಸ್ಯೆಗಳು ಎದುರಾದವು. ಕಾನ್ಷಿರಾಮ್‌ನಗರವು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದರೆ, 11ನೇ ವಾರ್ಡ್‌ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ದಾಸರಹಳ್ಳಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ 12ನೇ ವಾರ್ಡ್‌ಗೆ (ಶೆಟ್ಟಿಹಳ್ಳಿ) ಹೊಂದಿಕೊಂಡಂತೆ ಇರುವ ಈ ಬಡಾವಣೆಗಳನ್ನು 11ನೇ ವಾರ್ಡ್‌ಗೆ ಸೇರ್ಪಡೆ ಮಾಡಿದ್ದೇ ಈ ತೊಡಕುಗಳಿಗೆ ಕಾರಣ.

‘ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಾನ್ಷಿರಾಮ್‌ನಗರವನ್ನು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಇದರಿಂದ ಗೊಂದಲ ಉಂಟಾಗಿದ್ದು, 12ನೇ ವಾರ್ಡ್ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು. ತ್ವರಿತವಾಗಿ ನಾಗರಿಕ ಸೌಲಭ್ಯ ಕಲ್ಪಿಸಬೇಕು’ ಎಂದು ದಾಸರಹಳ್ಳಿಯ ಶಾಸಕ ಆರ್‌.ಮಂಜುನಾಥ್‌ ಅವರು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಬಳಿಕ 12ನೇ ವಾರ್ಡ್‌ ವ್ಯಾಪ್ತಿಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ಆರಂಭವಾಯಿತು. ಆ ತನಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಮುಂದುವರಿಸಲು ಸೂಚಿಸಲಾಯಿತು. ಈ ಪ್ರಕ್ರಿಯೆಗೆ ಅಷ್ಟೇನೂ ಸಮಯ ಹಿಡಿ ಯುವುದಿಲ್ಲ ಎಂದು ತಿಳಿಸಿದ್ದ ಹಿರಿಯ ಅಧಿಕಾರಿಗಳು, ಎಲ್ಲ ದಾಖಲೆಗಳನ್ನು ಮತ್ತೊಮ್ಮೆ ಗ್ರಾಮ ಪಂಚಾಯಿತಿಯಿಂದ ಪಡೆದು ಕೊಳ್ಳಲು ಮುಂದಾದರು. ಗ್ರಾಮ ಪಂಚಾಯಿತಿಯಿಂದ ವರದಿ ತರಿಸಿಕೊಂಡಿರುವ ಪಾಲಿಕೆ, ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದೆ. ಮತ್ತೊಮ್ಮೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕಿದೆ. ಸದ್ಯ ಈ ಕಡತ ನಗರಾಭಿವೃದ್ಧಿ ಇಲಾಖೆಯ ಮುಂದಿದೆ. ಇತ್ತ ಕಾನ್ಷಿರಾಮ್‌ನಗರ ಮತ್ತು ಲಕ್ಷ್ಮೀಪುರದ ಜನರು ನಾಗರಿಕ ಸೌಲಭ್ಯಗಳಿಲ್ಲದೆ ರೋಸಿ ಹೋಗಿದ್ದಾರೆ.

13 ವರ್ಷಗಳ ಅಲೆದಾಟ

‘ಅಧಿಕಾರಿಗಳು ಮಾಡಿದ ತಾಂತ್ರಿಕ ತಪ್ಪುಗಳಿಂದಾಗಿ ಕಾನ್ಷಿರಾಮ್‌ನಗರ ಮತ್ತು ಲಕ್ಷ್ಮೀಪುರದ ನಿವಾಸಿಗಳಾದ ಬಡ ಮತ್ತು ಮಧ್ಯಮ ವರ್ಗದ ಜನರು ಭಾರಿ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಹೇಳಿದರು.

‘2009ರಲ್ಲಿ ಅಧಿಸೂಚನೆಯಿಂದ ಕಾನ್ಷಿರಾಮ್‌ನಗರ ಹೊರಗುಳಿದ ಸಂದರ್ಭದಿಂದ ಈ ತನಕ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಅಧಿಸೂಚನೆ ಹೊರಡಿಸಲಾಯಿತು. ಆದರೆ, 12ನೇ ವಾರ್ಡ್ ಬದಲು 11ನೇ ವಾರ್ಡ್ ಎಂದು ನಮೂದಿಸಿ ಅಧಿಕಾರಿಗಳು ತೊಂದರೆಗೆ ಸಿಲುಕಿಸಿದರು’ ಎಂದರು. ‘ಸಮಾಜ ಕಲ್ಯಾಣ ಸಚಿವರು, ವಸತಿ ಸಚಿವರು, ನಗರಾಭಿವೃದ್ಧಿ ಸಚಿವರು, ಮುಖ್ಯಮಂತ್ರಿ ಅವರು ಸಲಹೆಗಾರರಿಂದಲೂ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಸಿದ್ದೇವೆ. ವಿಧಾನಸೌಧದಿಂದ ಕಾನ್ಷಿರಾಮ್‌ನಗರ 13 ಕಿಲೋ ಮೀಟರ್ ದೂರದಲ್ಲಿದೆ. ಬೇರೆ ಕ್ಷೇತ್ರದಲ್ಲಿ 30 ಕಿಲೋ ಮೀಟರ್ ದೂರದಲ್ಲಿರುವ ಬಡಾವಣೆಗಳೂ ಪಾಲಿಕೆ ಸೇರಿಕೊಂಡಿವೆ. ವಾರ, ದಿನಾಂಕ ತೋರಿಸಿ ಕಾಲ ತಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಾಂತ್ರಿಕ ಸಮಸ್ಯೆ ಸರಿಪಡಿಸಬೇಕಿರುವ ಈ ಕಡತವನ್ನು ಒಮ್ಮೆ ಸಚಿವ ಸಂಪುಟದ ಮುಂದೆ ತರಲಾಯಿತು. ಅದನ್ನು ಪ್ರತ್ಯೇಕವಾಗಿ ತರದೆ ರಾಜ್ಯದ ಎಲ್ಲ ಪಾಲಿಕೆ, ನಗರಸಭೆಗಳ ವ್ಯಾಪ್ತಿಗೆ ಸೇರಬೇಕಿರುವ ಹಳ್ಳಿಗಳ ಕಡತದೊಂದಿಗೆ ಅಧಿಕಾರಿಗಳು ಸೇರಿಸಿದರು. ಹೀಗಾಗಿ, ಸಂಪುಟದ ಅನುಮೋದನೆ ದೊರೆಯಲಿಲ್ಲ. ಅಧಿಕಾರಿಗಳ ಬೇಜವಾಬ್ದಾರಿ, ದುರುದ್ದೇಶದ ಫಲವಾಗಿ ಈ ಬಡಾವಣೆ ಜನರಿಗೆ ನಾಗರಿಕ ಸೌಲಭ್ಯ ಇಲ್ಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಯಲ್ಲೇ ಶವಸಂಸ್ಕಾರ

‘ಲಕ್ಷ್ಮೀಪುರ ಮತ್ತು ಕಾನ್ಷಿರಾಮ್‌ನಗರ ಪ್ರದೇಶದ ಜನರು ಈಗಲೂ ಕೆರೆಯಲ್ಲೇ ಮೃತರ ಅಂತ್ಯಸಂಸ್ಕಾರ ನಡೆಸುತ್ತಿದ್ದಾರೆ. ಹಸಿರುಗಟ್ಟಿರುವ ನೀರಿನೊಳಗೇ ಎಷ್ಟೋ ಶವಗಳನ್ನು ಹೂಳಲಾಗಿದೆ’ ಎಂದು ಸ್ಥಳೀಯರು ದೂರುತ್ತಾರೆ.

‘ಸರ್ಕಾರಿ ಭೂಮಿಯನ್ನು ಕೆಲವು ಭೂಗಳ್ಳರು ಕಬಳಿಸುವ ಪ್ರಯತ್ನ ಮಾಡಿದ್ದರು. ಐದೂವರೆ ಎಕರೆ ಜಾಗವನ್ನು ಬಿಡಿಸಿ ಅದರಲ್ಲಿ ಎರಡೂವರೆ ಎಕರೆ ಸ್ಮಶಾನ ಮತ್ತು ಮೂರು ಎಕರೆ ಸರ್ಕಾರಿ ಕಾಲೇಜು ನಿರ್ಮಾಣಕ್ಕೆ ಮೀಸಲಿರಿಸಿದ್ದೇವೆ’ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.

ಸುತ್ತಲೂ ಕಾಂಪೌಂಡ್ ನಿರ್ಮಿಸಿ ರಕ್ಷಣೆ ಮಾಡಿಕೊಳ್ಳದಿದ್ದರೆ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಾಗ ಮತ್ತೆ ಭೂಗಳ್ಳರ ಪಾಲಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ರಸ್ತೆಗಳೇ ಇಲ್ಲ, ಎಲ್ಲೆಲ್ಲೂ ಕಸ

ಈ ಎರಡೂ ಬಡಾವಣೆಗಳಲ್ಲಿ ಸುತ್ತಾಡಿದರೆ ಸುಸ್ಥಿತಿಯಲ್ಲಿರುವ ಒಂದೇ ಒಂದು ರಸ್ತೆಯೂ ಕಾಣಿಸದು. ಗುಂಡಿ ಬಿದ್ದಿರುವ ರಸ್ತೆಗಳ ನಡುವೆಯೇ ವಾಹನಗಳ ಸಂಚಾರ ಮಾಡಬೇಕಾಗಿದೆ.

ಪಾಲಿಕೆ ವ್ಯಾಪ್ತಿಗೆ ಸೇರಲಿರುವ ಬಡಾವಣೆ ಎಂಬ ಕಾರಣಕ್ಕೆ ದುರಸ್ತಿಗೆ ಗ್ರಾಮ ಪಂಚಾಯಿತಿ ಕೂಡ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ದೂರುತ್ತಾರೆ. ‘ಎಲ್ಲ ರಸ್ತೆಗಳ ಬದಿಯಲ್ಲೂ ಕಸದ ರಾಶಿ ಬಿದ್ದಿದ್ದು, ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಸುತ್ತಲೂ ಪಾಲಿಕೆ ವ್ಯಾಪ್ತಿಯಲ್ಲಿರುವ ಬಡಾವಣೆಗಳ ನಡುವೆ ಕಾನ್ಷಿರಾಮ್‌ನಗರ ಅನಾಥ ಸ್ಥಿತಿಯಲ್ಲಿದೆ’ ಎಂದು ನಿವಾಸಿ ರಾಜೇಶ್‌ ಬೇಸರ ವ್ಯಕ್ತಪಡಿಸಿದರು.

ಸಮಸ್ಯೆ ಸರಿಪಡಿಸಿ– ಶಾಸಕ ಒತ್ತಾಯ

‘ಬಿಬಿಎಂಪಿ ಪ್ರದೇಶದ ನಡುವೆ ಕಾನ್ಷಿರಾಮ್‌ನಗರ ಇದೆ. ನಮ್ಮ ಕ್ಷೇತ್ರ ವ್ಯಾಪ್ತಿಯ ಬಡಾವಣೆಗಳನ್ನು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಗೆ ಸೇರಿಸಲಾಗಿತ್ತು. ಸರಿಪಡಿಸುವ ಕಾರ್ಯ ಮಾಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ’ ಎಂದು ಶಾಸಕ ಆರ್. ಮಂಜುನಾಥ್ ಹೇಳಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಇಲ್ಲದ ಕಾರಣ ಸೌಲಭ್ಯಗಳಿಲ್ಲದೆ ಇಲ್ಲಿನ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಡಾವಣೆಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಯಾವಾಗ ಏನು?

l2007: ಪಾಲಿಕೆ ವ್ಯಾಪ್ತಿಗೆ ಸೇರಲು ಪ್ರಸ್ತಾಪವಾದ ವರ್ಷ

l2015: 11ನೇ ವಾರ್ಡ್‌ ವ್ಯಾಪ್ತಿಗೆ ಸೇರಿಸಿ ಅಧಿಸೂಚನೆ ಪ್ರಕಟಿಸಿದ ವರ್ಷ

l2016: 12ನೇ ವಾರ್ಡ್ ವ್ಯಾಪ್ತಿಗೆ ಸೇರಿಸಲು ಪ್ರಕ್ರಿಯೆ ಆರಂಭವಾದ ವರ್ಷ

lಬಡಾವಣೆಯಲ್ಲಿ 4 ಸಾವಿರಕ್ಕೂ ಹೆಚ್ಚು ಮನೆಗಳು ನಿರ್ಮಾಣವಾಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.