ಬೆಂಗಳೂರು: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ್ ಅವರಿಗೆ ಸಂಬಂಧಿಸಿದ ಅಶ್ಲೀಲ ಪೋಟೊ, ವಿಡಿಯೊ, ಸ್ಕ್ರೀನ್ ಶಾಟ್ ಅಥವಾ ಆಡಿಯೊಗಳನ್ನು ಪ್ರಸಾರ ಮತ್ತು ಪ್ರಕಟಣೆ ಮಾಡುವುದಕ್ಕೆ ಮಾಧ್ಯಮಗಳಿಗೆ ನಿರ್ಬಂಧ ಹೇರಿ ನಗರದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಧ್ಯಂತರ ನಿರ್ಬಂಧಕಾಜ್ಞೆ ಮಾಡಿದೆ.
ಈ ಸಂಬಂಧ ಕೆ.ಇ. ಕಾಂತೇಶ್ ಸಲ್ಲಿಸಿದ್ದ ಅಸಲು ದಾವೆ ವಿಚಾರಣೆ ನಡೆಸಿದ ನ್ಯಾಯಾಲಯ ಇದೇ 27ರಂದು ಈ ಆದೇಶ ಹೊರಡಿಸಿದೆ.
ದಾವೆಯಲ್ಲಿ ಪ್ರತಿವಾದಿಗಳಾಗಿರುವ ವಿವಿಧ ಮಾಧ್ಯಮಗಳಿಗೆ ನೋಟಿಸ್/ಸಮನ್ಸ್ ಜಾರಿಗೊಳಿಸಲು ಆದೇಶಿಸಲಾಗಿದ್ದು ವಿಚಾರಣೆಯನ್ನು 2024ರ ಆಗಸ್ಟ್ 3ಕ್ಕೆ ಮುಂದೂಡಲಾಗಿದೆ.
ದಾವೆಯಲ್ಲಿ ಏನಿದೆ?:
‘ಲೋಕಸಭೆ ಚುನಾವಣೆ ನಡೆಯುತ್ತಿರುವ ಈ ನಿರ್ಣಾಯಕ ಸಮಯದಲ್ಲಿ ಕೆಲ ಮಾಧ್ಯಮಗಳು ನನ್ನ ಘನತೆ, ಗೌರವ ಮತ್ತು ಮಾನಹಾನಿ ಮಾಡಲು ಪ್ರಯತ್ನಿಸುತ್ತಿವೆ. ನನ್ನ ನಕಲು ಮಾಡಿದ ಅಶ್ಲೀಲ ಪೋಟೊ, ವಿಡಿಯೊ ಮತ್ತು ಆಡಿಯೊಗಳನ್ನು ಪ್ರಸಾರ ಮಾಡಲು ಯತ್ನಿಸುತ್ತಿವೆ. ಒಂದೊಮ್ಮೆ ಅಂತಹ ಆಕ್ಷೇಪಾರ್ಹ ವಿಡಿಯೊ, ಫೋಟೊಗಳು ಪ್ರಸಾರಗೊಂಡರೆ ಅಥವಾ ಪ್ರಕಟವಾದರೆ ನನ್ನ ಮಾನಹಾನಿಯಾಗುತ್ತದೆ. ಆದ್ದರಿಂದ, ಮಾಧ್ಯಮಗಳ ವಿರುದ್ಧ ಮಧ್ಯಂತರ ನಿರ್ಬಂಧಕಾಜ್ಞೆ ಆದೇಶ ನೀಡಬೇಕು’ ಎಂದು ಕಾಂತೇಶ್ ದಾವೆಯಲ್ಲಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.