ಬೆಂಗಳೂರು: ಕಣ್ವ ಸೌಹಾರ್ದಕೋ–ಆಪರೇಟಿವ್ ಕ್ರೆಡಿಟ್ ಬ್ಯಾಂಕ್‌ನ ಮರು ಲೆಕ್ಕಪರಿಶೋಧನೆಗೆ ಸರ್ಕಾರ ಅನುಮತಿ ನೀಡಿದೆ.
‘ಕಣ್ವ ಸಮೂಹ ಸಿಬ್ಬಂದಿಗೆ ನೀಡಿರುವ ಸಾಲಗಳ ಸಂಖ್ಯೆ 4,500ಕ್ಕೂ ಹೆಚ್ಚಿದ್ದು, ಈ ಸಾಲ ವಸೂಲಾತಿಯಾಗಿಲ್ಲ. ಅಲ್ಲದೇ, 2016ಕ್ಕೂ ಮೊದಲು ನೀಡಿರುವ 7,738 ಸಾಲಗಳಲ್ಲಿ ಈವರೆಗೆ ಯಾವುದೇ ಮೊತ್ತ ವಸೂಲಿಯಾಗಿಲ್ಲ. ಆದರೆ, 2017–18ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಸುಸ್ತಿ ಸಾಲಗಳ ಸಂಖ್ಯೆ 82 ಆಗಿದ್ದು, ₹6.14 ಕೋಟಿ ಎಂದು ದಾಖಲಿಸಲಾಗಿದೆ. ವಾಸ್ತವಕ್ಕೂ ಈ ಮೊತ್ತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ’ ಎಂದು ಸಹಕಾರ ಸಂಘಗಳಲೆಕ್ಕಪರಿಶೋಧನಾ ನಿರ್ದೇಶಕರು ವರದಿಯಲ್ಲಿ ತಿಳಿಸಿದ್ದಾರೆ.
‘₹13.03 ಕೋಟಿ ಮೀಸಲು ನಿಧಿಯನ್ನು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳನ್ನು ಉಲ್ಲಂಘಿಸಿ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡಲಾಗಿದೆ. 2016–17ರಿಂದ 2018–19ರ ವರೆಗಿನ ಅವಧಿಯಲ್ಲಿ ಹಣ ದುರುಪಯೋಗ ಮತ್ತು ನಿಯಮ ಉಲ್ಲಂಘನೆ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರು ಲೆಕ್ಕಪರಿಶೋಧನೆಗೆ ಲೆಕ್ಕಪರಿಶೋಧನೆ ಇಲಾಖೆ ನಿರ್ದೇಶಕರು ಸಲ್ಲಿಸಿರುವ ಪ್ರಸ್ತಾವನೆ ಸಮಂಜಸವಾಗಿದೆ’ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕಿ ಸಾಧನಾ ಗಾಂವ್‌ಕರ ನೇತೃತ್ವದ ಮೂವರ ತಂಡ ರಚಿಸಿ ಮರು ಲೆಕ್ಕಪರಿಶೋಧನೆ ನಡೆಸಲು ಅನುಮತಿ ನೀಡಿ ಸರ್ಕಾರ ಆದೇಶಿಸಿದೆ.
ರಾಘವೇಂದ್ರ ಬ್ಯಾಂಕ್: ಲೆಕ್ಕ ಪರಿಶೋಧನೆಗೆ ತಂಡ ರಚನೆ
ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಮರು ಲೆಕ್ಕಪರಿಶೋಧನೆ ನಡೆಸಲು ಆರು ಮಂದಿಯ ತಂಡ ರಚಿಸಿರುವ ರಾಜ್ಯ ಸರ್ಕಾರ, ಎರಡು ತಿಂಗಳಲ್ಲಿ ವರದಿ ನೀಡಲು ಆದೇಶಿಸಿದೆ.
‘ಸಾಲ ನೀಡುವಿಕೆ ಮತ್ತು ಠೇವಣಿಗಳಲ್ಲಿ ನಿರಂತರವಾಗಿ ಅವ್ಯಹಾರ ನಡೆದಿದ್ದು, ₹701 ಕೋಟಿಯಷ್ಟು ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ’ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ವರದಿ ಸಲ್ಲಿಸಿದ್ದಾರೆ.
2014–15ರಿಂದ 2018–19ನೇ ಸಾಲಿನ ಪರಿಶೋಧಿತ ಲೆಕ್ಕಗಳ ಮರು ಪರಿಶೀಲನೆಗೆ ಅನುಮತಿ ನೀಡಬೇಕು ಎಂದು ಅವರು ಕೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.