ADVERTISEMENT

ಕಣ್ವ ಸೊಸೈಟಿ ವಂಚನೆ ಪ್ರಕರಣ: ಸಾವಿರಾರು ಅರ್ಜಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 19:03 IST
Last Updated 1 ಡಿಸೆಂಬರ್ 2022, 19:03 IST
   

ಬೆಂಗಳೂರು: ಚಾಪೆ, ದಿಂಬು ಹಿಡಿದು ಬಂದ ವಯಸ್ಕರು, ಕಾಯಿಲೆಯಿಂದ ಬಳಲುತ್ತಿದ್ದರೂ ಕೈಯಲ್ಲಿ ಅರ್ಜಿ ಹಿಡಿದು ತಾಸುಗಟ್ಟಲೆ ಕಾಯುತ್ತಿದ್ದ ಜನರು, ಮಕ್ಕಳೊಂದಿಗೆ ಬಂದಿದ್ದ ತಾಯಂದಿರು...

ಇವು ಹತ್ತು ದಿನಗಳಿಂದ ಶಾಂತಿ ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಎದುರು ಕಂಡುಬಂದ ದೃಶ್ಯಗಳು.

ಕಣ್ವ ಸಮೂಹ ಸಂಸ್ಥೆಯ ಕಣ್ವ ಸೌಹಾರ್ದ ಕೋ–ಆಪರೇಟಿವ್ ಸೊಸೈಟಿಯ ವಂಚನೆ ಪ್ರಕರಣದಲ್ಲಿ ವಂಚನೆ ಪ್ರಮಾಣದ ಮಾಹಿತಿ ಸಂಗ್ರಹಿಸುತ್ತಿದ್ದು, ಸರ್ಕಾರದ ಸೂಚನೆಯಂತೆ ಸೌಹಾರ್ದ ಫೆಡರೇಶನ್‌ ಹೂಡಿಕೆದಾರರಿಂದ ಕ್ಲೇಂ ಅರ್ಜಿ ಸ್ವೀಕರಿಸಿದೆ. ವಂಚನೆಗೆ ಒಳಗಾದವರು ಕಣ್ಣೀರು ಹಾಕುತ್ತಲೇ ಅರ್ಜಿ ಸಲ್ಲಿಸಿದ್ಧಾರೆ.

ADVERTISEMENT

‘ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯವಾಗಿದ್ದು, ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ’ ಎಂದು ಗುರು ರಾಘವೇಂದ್ರ ಕೋ–ಆಪರೇಟಿವ್ ಬ್ಯಾಂಕ್ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ಮಹಾಪೋಷಕ ಶಂಕರ್ ಗುಹಾ ದ್ವಾರಕಾನಾಥ್‌ ಬೆಳ್ಳೂರು ತಿಳಿಸಿದರು.

‘ಅಂದಾಜು 25 ಸಾವಿರದಷ್ಟು ಹೂಡಿಕೆದಾರರು ಹಾಗೂ ಷೇರುದಾರರು ಅರ್ಜಿ ಸಲ್ಲಿಸಿದ್ದಾರೆ. ಫೆಡರೇಶನ್‌ ಎರಡು ಪ್ರತ್ಯೇಕ ಕೌಂಟರ್ ತೆರೆದಿತ್ತು. ಬೆಳಗಾವಿ, ಕಲಬುರಗಿ, ಬೀದರ್‌, ರಾಯಚೂರು, ದಾವಣಗೆರೆ, ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಂದ ಹೂಡಿಕೆದಾರರು, ದಾಖಲೆ ಸಹಿತ ಅರ್ಜಿ ಸಲ್ಲಿಸಿದ್ದಾರೆ. ಬ್ಯಾಂಕ್ ಎಷ್ಟು ವಂಚನೆ ನಡೆಸಿದೆ ಎಂಬುದು ಇದುವರೆಗೂ ಗೊತ್ತಾಗಿಲ್ಲ. ವಂಚನೆ ಪ್ರಮಾಣ ಹಾಗೂ ಯಾರಿಗೆ ಎಷ್ಟು ಮೋಸವಾಗಿದೆ ಎಂಬುದರ ಮಾಹಿತಿ ಸಂಗ್ರಹಿಸುವುದರ ಭಾಗವಾಗಿ ಕ್ಲೇಮ್‌ ಅರ್ಜಿ ಸ್ವೀಕರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಹೂಡಿಕೆದಾರರಿಗೆ ವಂಚನೆ ಪ್ರಕರಣದ ಸಂಬಂಧ ಬಸವೇಶ್ವರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ನೂರಾರು ಕೋಟಿ ರೂಪಾಯಿ ವಂಚನೆ ಆರೋಪ ಕೇಳಿಬಂದಿತ್ತು. ವಂಚನೆ ಸಂಬಂಧ ದೂರು ಆಧರಿಸಿ ಬ್ಯಾಂಕ್‌ನ ಹಲವರನ್ನು ಪೊಲೀಸರು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.