ADVERTISEMENT

ಕೆಎಆರ್‌ಡಿ: ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹ- ಸ್ಥಾನಿಕ ವೈದ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 15:56 IST
Last Updated 12 ಆಗಸ್ಟ್ 2024, 15:56 IST
ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಎಆರ್‌ಡಿ) ನೇತೃತ್ವದಲ್ಲಿ ಸೋಮವಾರ ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು. ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್
ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘದ (ಕೆಎಆರ್‌ಡಿ) ನೇತೃತ್ವದಲ್ಲಿ ಸೋಮವಾರ ನಗರದ ಸ್ವಾತಂತ್ರ್ಯಉದ್ಯಾನದಲ್ಲಿ ಪ್ರತಿಭಟನೆ ನಡೆಯಿತು. ಪ್ರಜಾವಾಣಿ ಚಿತ್ರ /ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ಸ್ಥಾನಿಕ ವೈದ್ಯರ ಸಂಘವು (ಕೆಎಆರ್‌ಡಿ) ಸೋಮವಾರದಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ಕೈಗೊಂಡಿರುವುದರಿಂದ ರಾಜ್ಯದಾದ್ಯಂತ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.‌

ಸುಮಾರು ನಾಲ್ಕು ಸಾವಿರ ಸ್ಥಾನಿಕ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಿಲ್ಲಾ ಕೇಂದ್ರಗಳಲ್ಲಿ ರೋಗಿಗಳು ಚಿಕಿತ್ಸೆ ದೊರೆಯದೆ ತೊಂದರೆ ಅನುಭವಿಸಿದರು. ತುರ್ತು ಚಿಕಿತ್ಸೆ ಲಭ್ಯವಿತ್ತು. ಹೊರ ರೋಗಿಗಳ ವಿಭಾಗ ಹಾಗೂ ತುರ್ತು ಅಲ್ಲದ ಸೇವೆಗಳು ಇರಲಿಲ್ಲ. 

ಪರಿಣಾಮ ಆಸ್ಪತ್ರೆಯಲ್ಲಿನ ಹಲವು ವಿಭಾಗಗಳ ಎದುರು ರೋಗಿಗಳು ಸರದಿ ಸಾಲಿನಲ್ಲಿ ನಿಂತಿದ್ದರು. ವೈದ್ಯರ ಪ್ರತಿಭಟನೆಯ ಮಾಹಿತಿಯಿಲ್ಲದೆ ಬೇರೆ ಊರುಗಳಿಂದ ಬಂದ ರೋಗಿಗಳು, ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಸಮಸ್ಯೆ ಎದುರಿಸಿದರು. ಕೆಲ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದರು.

ADVERTISEMENT

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 700ಕ್ಕೂ ಹೆಚ್ಚು ಸ್ಥಾನಿಕ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಗರದ ವಾಣಿ ವಿಲಾಸ, ವಿಕ್ಟೋರಿಯಾ, ಮಿಂಟೊ, ಬೌರಿಂಗ್ ಮತ್ತು ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಚಿಕಿತ್ಸೆ ಪಡೆದುಕೊಳ್ಳಲು ಕಷ್ಟವಾಯಿತು..

ಬೇಡಿಕೆ: ವಿದ್ಯಾರ್ಥಿ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ, ವೈದ್ಯಕೀಯ ಶಿಕ್ಷಣ ಸಚಿವರು ಸೇರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಒಂದು ವರ್ಷದಿಂದ ಮನವಿ ಸಲ್ಲಿಸಿದ್ದೇವೆ. ಪ್ರತಿಕ್ರಿಯೆ ದೊರೆತಿಲ್ಲ. ಹೀಗಾಗಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಡಾ. ಸಿರೀಶ್ ಶಿವರಾಮಯ್ಯ ಹೇಳಿದರು.

‘ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಶುಲ್ಕ ಅಧಿಕವಿದೆ. ಹೆಚ್ಚು ಪ್ರವೇಶ ಶುಲ್ಕ ಪಡೆದು, ಕಡಿಮೆ ವಿದ್ಯಾರ್ಥಿ ವೇತನ ನೀಡುವ ಮೂಲಕ ವಂಚಿಸಲಾಗುತ್ತಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.