ADVERTISEMENT

ಅರಣ್ಯ ಕಾಯ್ದೆ ಉಲ್ಲಂಘನೆ ₹10 ಲಕ್ಷದವರೆಗೆ ದಂಡ: ಸುಧಾರಣಾ ಆಯೋಗದ ಆರನೇ ವರದಿ

ರಾಜ್ಯ ಆಡಳಿತ ಸುಧಾರಣಾ ಆಯೋಗದ ಆರನೇ ವರದಿ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 16:09 IST
Last Updated 25 ನವೆಂಬರ್ 2023, 16:09 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕರ್ನಾಟಕ ಅರಣ್ಯ ಕಾಯ್ದೆ–1963ರ ಉಲ್ಲಂಘನೆ ಆರೋಪದಡಿ ದಂಡ ವಿಧಿಸಿ ಮುಕ್ತಾಯಗೊಳಿಸಬಹುದಾದ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ₹10 ಲಕ್ಷದವರೆಗೆ ಹೆಚ್ಚಳ ಮಾಡುವಂತೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ನೇತೃತ್ವದ ಎರಡನೇ ಆಡಳಿತ ಸುಧಾರಣಾ ಆಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತನ್ನ ಆರನೇ ವರದಿಯನ್ನು ಶನಿವಾರ ಸಲ್ಲಿಸಿತು. ಹಲವು ಪ್ರಮುಖ ಇಲಾಖೆಗಳಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ವರದಿಯಲ್ಲಿ ನೀಡಲಾಗಿದೆ.

ADVERTISEMENT

‘ಕರ್ನಾಟಕ ಅರಣ್ಯ ಕಾಯ್ದೆ–1963 ಸೆಕ್ಷನ್‌ 72 ಮತ್ತು 73ರ ಉಲ್ಲಂಘನೆಯಡಿ ದಾಖಲಿಸಿದ ಒಂದು ಲಕ್ಷ ಪ್ರಕರಣಗಳು ಬಾಕಿ ಇವೆ. ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕಾಯ್ದೆಗೆ ತಿದ್ದುಪಡಿ ತಂದು, ಉಪ ವಲಯ ಅರಣ್ಯಾಧಿಕಾರಿಗಳಿಗೂ ದಂಡ ವಿಧಿಸುವ (ಕಾಂಪೌಂಡ್‌) ಅಧಿಕಾರವನ್ನು ಪ್ರತ್ಯಾಯೋಜನೆ ಮಾಡಬೇಕು’ ಎಂದು ಆಯೋಗ ಶಿಫಾರಸು ಮಾಡಿದೆ.

ಕಾಂಪೌಂಡ್‌ ಮಾಡಬಹುದಾದ ಪ್ರಕರಣಗಳಲ್ಲಿ ವಿಧಿಸುವ ದಂಡದ ಗರಿಷ್ಠ ಮಿತಿಯನ್ನು 1981ರಲ್ಲಿ ₹50,000 ಎಂದು ನಿಗದಿಪಡಿಸಲಾಗಿತ್ತು. ಅದನ್ನು ಪ್ರಸ್ತುತ ಸಂದರ್ಭದ ಹಣದುಬ್ಬರಕ್ಕೆ ಅನುಗುಣವಾಗಿ ದಂಡದ ಗರಿಷ್ಠ ಮೊತ್ತವನ್ನು 20 ಪಟ್ಟು ಅಂದರೆ, ₹10 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಶಿಫಾರಸಿನಲ್ಲಿ ತಿಳಿಸಿದೆ.

ಚಿರತೆ ರಕ್ಷಣೆ ಕೇಂದ್ರ: ರಾಜ್ಯದಲ್ಲಿ ಚಿರತೆಗಳು ಜನವಸತಿ ಪ್ರದೇಶಗಳನ್ನು ಪ್ರವೇಶಿಸುತ್ತಿರುವುದು ಹೆಚ್ಚುತ್ತಿರುವುದರಿಂದ ಚಿರತೆ ರಕ್ಷಣಾ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ. ಈಗ ಮೈಸೂರಿನಲ್ಲಿರುವ ರಕ್ಷಣಾ ಕೇಂದ್ರದಲ್ಲಿ 17 ಚಿರತೆಗಳಿಗೆ ಮಾತ್ರ ಅವಕಾಶ ಕಲ್ಪಿಸಲು ಸಾಧ್ಯವಿದೆ.

ಇ–ಆಫೀಸ್‌ ಕಡ್ಡಾಯ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಕೆಳಹಂತದ ಕಚೇರಿಗಳಲ್ಲೂ ಇ–ಆಫೀಸ್‌ ತಂತ್ರಾಂಶದ ಮೂಲಕ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಇ–ಆಡಳಿತ ಅನುಷ್ಠಾನಕ್ಕೆ ಕಾಲಮಿತಿ ನಿಗದಿಪಡಿಸಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇ–ಸಂಗ್ರಹಣಾ ಪೋರ್ಟಲ್‌ನಲ್ಲಿರುವ ಎಲ್ಲ ಟೆಂಡರ್‌ ದಾಖಲೆಗಳನ್ನು ಸಾರ್ವಜನಿಕ ಡೊಮೈನ್‌ ಒಂದರಲ್ಲಿ ಅಪ್‌ಲೋಡ್‌ ಮಾಡಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರು ಶುಲ್ಕ ಪಾವತಿಸಿ ಪಡೆಯುವ ಬದಲು ಮುಕ್ತವಾಗಿ ದಾಖಲೆಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ 2.16 ಲಕ್ಷ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಬಾಕಿ ಉಳಿಸಿಕೊಂಡಿದೆ. ವಸತಿ ಇಲಾಖೆಯು ಮಂಡಳಿಗೆ ಹಕ್ಕುಪತ್ರ ವಿತರಣೆಗೆ ಸಂಬಂಧಿಸಿದಂತೆ ವಾರ್ಷಿಕ ಮತ್ತು ಮಾಸಿಕ ಗುರಿ ನಿಗದಿಪಡಿಸಬೇಕು ಎಂದು ಆಯೋಗ ಹೇಳಿದೆ.

ಭೂ ಪರಿವರ್ತನೆ ಸರಳೀಕರಣಕ್ಕೆ ಶಿಫಾರಸು

ವಸತಿ ಮತ್ತು ವಾಣಿಜ್ಯ ಉದ್ದೇಶಗಳಿಗೆ 10 ಎಕರೆ ಅಥವಾ 20,000 ಚದರ ಅಡಿಗಳಷ್ಟು ವಿಸ್ತೀರ್ಣದವರೆಗಿನ ಕೃಷಿ ಜಮೀನನ್ನು ಪರಿವರ್ತಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪತ್ರ ಪಡೆಯುವುದನ್ನು ಕೈಬಿಡಬೇಕು ಎಂದು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.

‘ವಸತಿ ಮತ್ತು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆ ಪ್ರಕ್ರಿಯೆಯನ್ನು ಸರಳೀಕರಣ ಮಾಡಲು ಈ ಕ್ರಮ ಅಗತ್ಯ. ಕೈಗಾರಿಕಾ ಉದ್ದೇಶದ ಭೂ ಪರಿವರ್ತನೆಗೆ ಮಾತ್ರ ನಿರಾಕ್ಷೇಪಣ ಪತ್ರ ಪಡೆಯುವಂತಿರಬೇಕು’ ಎಂದು ವರದಿಯಲ್ಲಿ ತಿಳಿಸಿದೆ.

ತುಂಡು ಗುತ್ತಿಗೆ: ಕುಡಿಯುವ ನೀರು ಪೂರೈಕೆ, ಭದ್ರತಾ ಬ್ಯಾರಿಕೇಡ್‌ ಅಳವಡಿಕೆ, ರಸ್ತೆ ಗುಂಡಿ ಮುಚ್ಚುವುದು, ವಿದ್ಯುತ್‌ ಪೂರೈಕೆ ಪುನರಾರಂಭ ಸೇರಿದಂತೆ ತುರ್ತು ಕೆಲಸಗಳಿಗೆ ₹2 ಲಕ್ಷದವರೆಗಿನ ಕಾಮಗಾರಿಗಳನ್ನು ತುಂಡು ಗುತ್ತಿಗೆಯಡಿ ಕೈಗೊಳ್ಳುವ ಅಧಿಕಾರವನ್ನು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿದೆ.

ಇತರ ಪ್ರಮುಖ ಶಿಫಾರಸುಗಳು

*ದೀರ್ಘ ಕಾಲದಿಂದ ನಿವೇಶನವನ್ನು ಖಾಲಿ ಇರಿಸಿಕೊಂಡ ಮಾಲೀಕರಿಗೆ ದಂಡ ವಿಧಿಸಬೇಕು

*ಕೇಂದ್ರದ ಮಾದರಿಯಲ್ಲಿ ರಾಜ್ಯದಲ್ಲೂ ಗಣಿ ಬ್ಯೂರೊ ಆರಂಭಿಸಬೇಕು

*ಸಕ್ಕರೆ ನಿರ್ದೇಶನಾಲಯದಲ್ಲಿ ಸಹಕಾರ ಇಲಾಖೆಯ ಅಧಿಕಾರಿಗಳ ಹುದ್ದೆಗಳನ್ನು ರದ್ದುಗೊಳಿಸಬೇಕು

*ಸಕ್ರಿಯ ನೀರು ಬಳಕೆದಾರರ ಸಂಘಗಳಿಗೆ ವಾರ್ಷಿಕ ₹2 ಲಕ್ಷ ಅನುದಾನ ನಿಡಬೇಕು

*ಹಳೆಯ ಬೀದಿ ದೀಪಗಳನ್ನು ಬದಲಾಯಿಸುತ್ತಿರುವ ಮಾದರಿಯಲ್ಲಿ ಅಸಮರ್ಥ ಮೋಟಾರ್‌ ಮತ್ತು ಪಂಪ್‌ಗಳನ್ನು ಬದಲಿಸಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.