ಬೆಂಗಳೂರು: ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ 29ರಿಂದ ಮಾ.3ರವರೆಗೆ ‘ಕರ್ನಾಟಕ ಅಗ್ರಿಮ್ಯಾಕ್ ಇಂಡಿಯಾ 2024’ – ಅತ್ಯಾಧುನಿಕ ಕೃಷಿ ಯಂತ್ರೋಪಕರಣ ಪ್ರದರ್ಶನ ಮತ್ತು ಸಮ್ಮೇಳನವನ್ನು ಆಯೋಜಿಸಲಾಗಿದೆ.
ಭಾರತೀಯ ಕೈಗಾರಿಕೆ ಮತ್ತು ವಾಣಿಜ್ಯೋದ್ಯಮಗಳ ಒಕ್ಕೂಟ(ಎಫ್‌ಐಸಿಸಿಐ) ಮತ್ತು ಇಟಲಿಯ ಫೆಡೆರ್ ಉನಾಕೊಮಾ ಕೃಷಿ ಯಂತ್ರಗಳ ತಯಾರಕರ ಒಕ್ಕೂಟ ಜಂಟಿಯಾಗಿ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಸಹಭಾಗಿತ್ವದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಕಾರ್ಮಿಕರ ಕೊರತೆ, ಕಡಿಮೆ ಇಳುವರಿ ಸೇರಿದಂತೆ ಕೃಷಿಯಲ್ಲಿ ತಲೆದೋರಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಪ್ರದರ್ಶನ ಮತ್ತು ಸಮ್ಮೇಳನದ ಪ್ರಮುಖ ಉದ್ದೇಶಗಳಲ್ಲೊಂದು.
ಸಮ್ಮೇಳನದಲ್ಲಿ 300ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಳ್ಳುತ್ತಿದ್ದಾರೆ. ಭಾರತದ ಪ್ರಮುಖ ಕೃಷಿ ಯಂತ್ರೋಪಕರಣ ತಯಾರಕರು ವಿವಿಧ ರಾಜ್ಯಗಳು ಸೇರಿದಂತೆ ಇಟಲಿ, ಟರ್ಕಿ, ಥಾಯ್ಲೆಂಡ್, ಸ್ಪೇನ್ ಮತ್ತು ಜಪಾನ್ ದೇಶದ ಕಂಪನಿಗಳು ಭಾಗವಹಿಸಲಿವೆ.
ಭತ್ತ ಬೇರ್ಪಡಿಸುವ ಯಂತ್ರಗಳು, ತೋಟದ ಉಪಕರಣಗಳು, ರಸಗೊಬ್ಬರ ಹರಡುವ ಯಂತ್ರಗಳು, ಎಲ್ಲಾ ಭೂಪ್ರದೇಶಗಳಲ್ಲೂ ಸಂಚರಿಸಬಲ್ಲ ವಾಹನಗಳು, ಪವರ್ ಟಿಲ್ಲರ್ ಹಾಗೂ ಡ್ರೋನ್ ಸೇರಿದಂತೆ ನವೀನ ತಂತ್ರಜ್ಞಾನಗಳ ಉಪಕರಣಗಳು ಈ ಪ್ರದರ್ಶನದಲ್ಲಿರಲಿವೆ. ಜೊತೆಗೆ, ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರ ನೇತೃತ್ವದಲ್ಲಿ ಕೃಷಿ ಅಭಿವೃದ್ಧಿಗೆ ಸಂಬಂಧಿಸಿದ ಚರ್ಚೆ-ವಿಚಾರಸಂಕಿರಣಗಳು ನಡೆಯಲಿವೆ. ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆಗಳು, ಕಿಸಾನ್ ತರಬೇತಿ ಉಪನ್ಯಾಸಗಳೂ ಸಮ್ಮೇಳನದಲ್ಲಿರುತ್ತವೆ.
ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಇಟಲಿಯ ಕಾನ್ಸುಲ್ ಜನರಲ್ ಅಲ್ಫೊನ್ಸೊ ಟಾಗ್ಲಿಯಾಫೆರ‍್ರಿ ಸೇರಿದಂತೆ ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ. ಕೃಷಿ ಇಲಾಖೆಯ ಕಾರ್ಯದರ್ಶಿ ವಿ. ಅನ್ಬುಕುಮಾರ್, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಮತ್ತಿತರ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.