ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷರೂ ಆಗಿರುವ ದೇವರ ಹಿಪ್ಪರಗಿ ಕ್ಷೇತ್ರದ ಬಿಜೆಪಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರಿಗೆ ನಿಗಮದಿಂದ ನೀಡಿದ್ದ ಎರಡು ಸರ್ಕಾರಿ ಕಾರುಗಳನ್ನು ಭಾನುವಾರವೇ ವಾಪಸ್ ಪಡೆಯಲಾಗಿದೆ.
ನಡಹಳ್ಳಿ ಅವರಿಗೆ ನಿಗಮದಿಂದ ಒಂದು ಟೊಯೊಟಾ ಇನ್ನೋವಾ ಮತ್ತು ಒಂದು ಟೊಯೊಟಾ ಕೊರೊಲ್ಲಾ ಕಾರು ನೀಡಲಾಗಿತ್ತು. ಮಾರ್ಚ್ 29ರಿಂದ ಚುನಾವಣಾ ನೀತಿಸಂಹಿತೆ ಜಾರಿಯಾಗಿರುವ ಕಾರಣದಿಂದ ಸರ್ಕಾರಿ ಕಾರುಗಳನ್ನು ಹಿಂದಿರುಗಿಸುವಂತೆ ಸೂಚಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಪತ್ರ ಬರೆದಿದ್ದರು. ಆದರೆ, ಅಧ್ಯಕ್ಷರ ಅಧಿಕಾರದ ಅವಧಿ ಇನ್ನೂ ಇದೆ ಎಂಬ ಕಾರಣ ನೀಡಿ ಕಾರು ಮರಳಿಸಿರಲಿಲ್ಲ. ಅಧ್ಯಕ್ಷರ ಬೆಂಗಳೂರಿನ ಮನೆಯಲ್ಲಿ ಕಾರುಗಳನ್ನು ನಿಲುಗಡೆ ಮಾಡಲಾಗಿದೆ ಎಂದು ನಡಹಳ್ಳಿ ಅವರ ಆಪ್ತ ಸಹಾಯಕ ನಿಗಮದ ಅಧ್ಯಕ್ಷರಿಗೆ ಪತ್ರ ಬರೆದಿದ್ದರು.
‘ಕಾರು ಹಿಂದಿರುಗಿಸದ ನಡಹಳ್ಳಿ!’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ‘ನೀತಿಸಂಹಿತೆ ಜಾರಿಯಾದ ಬಳಿಕವೂ ಕಾರನ್ನು ತಮ್ಮ ಬಳಿ ಇರಿಸಿಕೊಳ್ಳುವುದಾಗಿ ಅಧ್ಯಕ್ಷರು ಹೇಳಿದ್ದರಿಂದ ಗೊಂದಲ ಉಂಟಾಗಿತ್ತು. ಭಾನುವಾರವೇ ಎರಡೂ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.