ADVERTISEMENT

ಯಲಹಂಕ ಕ್ಷೇತ್ರ: ಬಿಜೆಪಿ ಕೋಟೆಯಲ್ಲಿ ಪ್ರಬಲ ಪೈಪೋಟಿ

ಸಚ್ಚಿದಾನಂದ ಕುರಗುಂದ
Published 7 ಮೇ 2023, 21:45 IST
Last Updated 7 ಮೇ 2023, 21:45 IST
ಎಸ್‌.ಆರ್‌. ವಿಶ್ವನಾಥ್‌
ಎಸ್‌.ಆರ್‌. ವಿಶ್ವನಾಥ್‌   

ಬೆಂಗಳೂರು: ನಗರ ಮತ್ತು ಗ್ರಾಮೀಣ ಪ್ರದೇಶ ಹೊಂದಿರುವ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯ.

ಬಿಜೆಪಿಯ ಈ ಭದ್ರಕೋಟೆಯಲ್ಲಿ ನುಗ್ಗಲು ಕಾಂಗ್ರೆಸ್‌, ಜೆಡಿಎಸ್‌ ತೀವ್ರ ಪೈಪೋಟಿ ನಡೆಸುತ್ತಿವೆ. ಇದೇ ಕ್ಷೇತ್ರದಿಂದ 2008ರಿಂದ ಸತತ ಮೂರು ಬಾರಿ ಜಯ ಸಾಧಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರೂ ಆಗಿರುವ ಹಾಲಿ ಶಾಸಕ ಎಸ್‌.ಆರ್‌. ವಿಶ್ವನಾಥ್‌, ನಾಲ್ಕನೇ ಬಾರಿ ಅಗ್ನಿ ಪರೀಕ್ಷೆ ಎದುರಿಸುತ್ತಿದ್ದಾರೆ.

ಕ್ಷೇತ್ರದ ಕೆಲವೆಡೆ ಇರುವ ಆಡಳಿತ ವಿರೋಧಿ ಅಲೆಯನ್ನು ಹಿಮ್ಮೆಟ್ಟಿಸಿ ಗೆಲುವಿನ ಮಾರ್ಗ ಕಂಡುಕೊಳ್ಳಲು ವಿಶ್ವನಾಥ್‌ ಸರ್ವ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಡಾ. ಕೆ. ಶಿವರಾಮ ಕಾರಂತ ಬಡಾವಣೆಗಾಗಿ ಬಿಡಿಎ ಬೆಂಗಳೂರು ಉತ್ತರ ತಾಲ್ಲೂಕಿನ 17 ಗ್ರಾಮಗಳಲ್ಲಿನ 3,500 ಎಕರೆ ಕೃಷಿ ಪ್ರದೇಶ ಸ್ವಾಧೀನಪಡಿಸಿಕೊಂಡಿರುವ ಸ್ಥಳಗಳಲ್ಲಿ ವಿಶ್ವನಾಥ್‌ ಅವರ ಬಗ್ಗೆ ಅಸಮಾಧಾನ ಇದೆ.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಶವ ರಾಜಣ್ಣ ಬಿ. ಮತ್ತು ಜೆಡಿಎಸ್‌ ಅಭ್ಯರ್ಥಿ ಎಂ. ಮುನೇಗೌಡ ಅವರು ಆಡಳಿತ ವಿರೋಧ ಅಲೆಯನ್ನು ತಮ್ಮ ಮತಗಳನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದ್ದಾರೆ. ಎಂ. ಸಂದೀಪ್‌ ಅವರನ್ನು ಬಿಎಸ್‌ಪಿ ಕಣಕ್ಕಿಳಿಸಿದೆ. ಆಮ್‌ ಆದ್ಮಿ ಪಕ್ಷದಿಂದ ಪಿ. ಮಂಜುನಾಥ್‌ ಸ್ಪರ್ಧಿಸಿದ್ದಾರೆ. ಜನರ ಹಿತಾಸಕ್ತಿ ಕಾಪಾಡುವಲ್ಲಿ ವಿಶ್ವನಾಥ್‌ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳು ಮತಯಾಚಿಸುತ್ತಿದ್ದಾರೆ.

‘ರೈತರ ಆಕ್ರೋಶದ ಬಗ್ಗೆ ಪಕ್ಷಕ್ಕೆ ಅರಿವು ಇದೆ. ಈ ಆಕ್ರೋಶವನ್ನು ತಣಿಸಲು ವಿಶ್ವನಾಥ್‌ ಎಲ್ಲ ಪ್ರಯತ್ನ ನಡೆಸಿದ್ದಾರೆ. ಪ್ರತಿಸ್ಪರ್ಧಿಗಳ ಆರೋಪಗಳಿಗಿಂತ ಅಭಿವೃದ್ಧಿ ಕಾರ್ಯಕ್ಕೆ ಮತದಾರರು ಮನ್ನಣೆ ನೀಡುವ ವಿಶ್ವಾಸವಿದೆ. ಹೀಗಾಗಿ, ಹಿಂದಿನ ಚುನಾವಣೆಗಳಿಂತಲೂ ಈ ಬಾರಿ ಹೆಚ್ಚು ಮತ ಪಡೆಯುವ ವಿಶ್ವಾಸವಿದೆ’ ಎಂದು ಬಿಜೆಪಿಯ ಸ್ಥಳೀಯ ಮುಖಂಡರು ಹೇಳುತ್ತಾರೆ.

ಈ ಬಾರಿ ಆಡಳಿತ ವಿರೋಧಿ ಅಲೆ ಇದ್ದರೂ ವಿಶ್ವನಾಥ್‌ ಅವರ ಪ್ರಮುಖ ಪ್ರತಿಸ್ಫರ್ಧಿಯಾಗಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಗೆಲುವಿನ ಮಾರ್ಗದಲ್ಲಿ ಸಾಗಲು ಹರಸಾಹಸ ಮಾಡಬೇಕಾಗಿದೆ. ಕೇಶವ ರಾಜಣ್ಣ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಗುರುತಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂರು ಚುನಾವಣೆಗಳಲ್ಲಿ ಜೆಡಿಎಸ್‌ ಎರಡನೇ ಸ್ಥಾನ ಮತ್ತು ಕಾಂಗ್ರೆಸ್‌ ಮೂರನೇ ಸ್ಥಾನ ಪಡೆದಿತ್ತು. ಪ್ರಬಲ ಪೈಪೋಟಿ ನೀಡುತ್ತಿದ್ದ ಜೆಡಿಎಸ್‌ ಶಕ್ತಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಕ್ಷೇತ್ರದಲ್ಲಿನ ಟ್ರಾಫಿಕ್‌, ಕುಡಿಯುವ ನೀರಿನ ಸಮಸ್ಯೆ ಈವರೆಗೆ ಬಗೆಹರಿದಿಲ್ಲ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಕಾಮಗಾರಿ ತ್ವರಿತಗತಿಯಲ್ಲಿ ನಡೆಯಬೇಕು ಮತ್ತು ಜಾರಕಬಂಡೆ ಕಾವಲ್‌ ಅರಣ್ಯವನ್ನು ಉದ್ಯಾನವಾಗಿ ಪರಿವರ್ತಿಸುವ ಯೋಜನೆ ಕೈಬಿಡುವುದು ಹಾಗೂ ಹೆಸರಘಟ್ಟ ಹುಲ್ಲುಗಾವಲು ಪ್ರದೇಶವನ್ನು
ಮೀಸಲು ಸಂರಕ್ಷಿತ ಪ್ರದೇಶವನ್ನಾಗಿ ಘೋಷಿಸುವ ವಿಷಯಗಳು ಈ ಬಾರಿ ಚುನಾವಣೆಯಲ್ಲಿ ಪ್ರಸ್ತಾಪವಾಗಿದ್ದರೂ ಫಲಿತಾಂಶದ ಮೇಲೆ  ಪರಿಣಾಮ ಬೀರುವುದಿಲ್ಲ ಎನ್ನುವುದು ಸ್ಥಳೀಯರ ವಿಶ್ಲೇಷಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.