ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ಬಿಟಿಎಂ ಲೇಔಟ್ ವಿಧಾನಸಭೆ ಕ್ಷೇತ್ರ ರಚನೆಯಾದ ವರ್ಷದಿಂದಲೂ ಇಲ್ಲಿ ವಿಜಯ ಸಾಧಿಸಿದ್ದಾರೆ. ಜಯನಗರ ಕ್ಷೇತ್ರ ಸೇರಿ ಏಳು ಬಾರಿ ವಿಜಯ ಸಾಧಿಸಿರುವ ಅವರು, ಬಿಟಿಎಂ ಲೇಔಟ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ್ದಾರೆ. ಇವರ ಓಟಕ್ಕೆ ತಡೆ ಹಾಕಲು ಬಿಜೆಪಿ ಹೊಸ ದಾರಿ ಹುಡುಕುತ್ತಿದೆ. ಸ್ಥಳೀಯವಾಗಿ ಸಾಧ್ಯವಾಗದಿದ್ದರೆ ಹೊರಭಾಗದಿಂದ ಪ್ರಬಲ ಅಭ್ಯರ್ಥಿಯನ್ನು ಕರೆತಂದು ಇಲ್ಲಿ ನಿಲ್ಲಿಸುವ ತಂತ್ರವನ್ನು ಬಿಜೆಪಿ ಹೆಣೆಯುತ್ತಿದೆ.
ಜಯನಗರದಲ್ಲಿ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದ ರಾಮಲಿಂಗಾರೆಡ್ಡಿ ಅವರು 2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ, ಹೊಸದಾಗಿ ರಚನೆಯಾದ ಬಿಟಿಎಂ ಲೇಔಟ್ ಕ್ಷೇತ್ರಕ್ಕೆ ಬಂದರು. ಅಂದಿನಿಂದ ಈವರೆಗೆ ಈ ಕ್ಷೇತ್ರ ಕಾಂಗ್ರೆಸ್ ತೆಕ್ಕೆಯಲ್ಲಿದೆ. ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಅವರು ಸಚಿವರಾಗಿಯೂ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡಿದ್ದಾರೆ. ಆದರೂ ಕೊಳೆಗೇರಿಗಳು ಹೆಚ್ಚಿರುವ ಕಾರಣ ಅಭಿವೃದ್ಧಿ ಕಾಣಬೇಕಾದ ಪ್ರದೇಶಗಳು ಹೆಚ್ಚಿವೆ. ಕೊಳೆಗೇರಿಗಳ ಅಭಿವೃದ್ಧಿಯಲ್ಲಿ ಕೊರತೆ, ಸಂಚಾರದಟ್ಟಣೆ ನಿವಾರಣೆಗೆ ಶಾಶ್ವತ ಕ್ರಮ ಕೈಗೊಳ್ಳದ ಆರೋಪಗಳಿವೆ.
ಈ ಬಾರಿಯೂ ಕಾಂಗ್ರೆಸ್‌ನಿಂದ ರಾಮಲಿಂಗಾರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗುವುದು ಖಚಿತ. ಇವರಲ್ಲದೆ ಬೇರೆಯವರು ಇಲ್ಲಿ ಆಕಾಂಕ್ಷಿಗಳಲ್ಲ. ರೆಡ್ಡಿ ಅವರಿಗೆ 2008ರಲ್ಲಿ ಹೆಚ್ಚು ಪೈಪೋಟಿ ವ್ಯಕ್ತವಾಗಿತ್ತು. 2013ರಲ್ಲಿ ಗೆಲುವು ಸುಲಭವಾಗಿತ್ತು. ಆದರೆ, ಕಳೆದ ಬಾರಿ ಪಡೆದ ಮತಗಳೂ ಕಡಿಮೆಯಾಗಿ, ಪೈಪೋಟಿ ಹೆಚ್ಚಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಲಲ್ಲೇಶ್‌ರೆಡ್ಡಿ ಪ್ರತಿರೋಧ ತೋರಿದ್ದರು.
ಬಿಜೆಪಿಯಲ್ಲಿ ಯುವಮೋರ್ಚಾದ ಅನಿಲ್ ಶೆಟ್ಟಿ, ಶ್ರೀಧರ್ ರೆಡ್ಡಿ, ಜಯದೇವ್ ಅವರು ಆಕಾಂಕ್ಷಿಗಳಾಗಿದ್ದಾರೆ. ಆದರೆ 2008ರಲ್ಲಿ ಪ್ರಸಾದ್ ರೆಡ್ಡಿ ನೀಡಿದ್ದ ಪೈಪೋಟಿಯನ್ನು ಮತ್ತೆ ನೀಡುವ ಅಭ್ಯರ್ಥಿಯನ್ನು ಹುಡುಕಲಾಗುತ್ತಿದೆ. ಕಳೆದ ಬಾರಿಯೂ ಬಿಜೆಪಿ 46 ಸಾವಿರದಷ್ಟು ಮತ ಪಡೆದಿದ್ದರೂ 20 ಸಾವಿರ ಅಂತರದಲ್ಲಿ ಸೋಲು ಕಂಡಿತ್ತು. ಹೀಗಾಗಿ, ಪ್ರಬಲ ಸ್ಪರ್ಧಿಯನ್ನು ಬಿಜೆಪಿ ಕಣಕ್ಕಿಳಿಸಲು ಉದ್ದೇಶಿಸಿದೆ. ರೆಡ್ಡಿ ಸಮುದಾಯದ ಮತಗಳನ್ನು ಸೆಳೆಯಲು ಕೆ.ಆರ್. ಪುರದಲ್ಲಿ ಬಸವರಾಜು ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟಿರುವ ನಂದೀಶ್ ರೆಡ್ಡಿ ಈ ಬಾರಿ ಬಿಟಿಎಂ ಲೇಔಟ್‌ನಲ್ಲಿ ಕಣಕ್ಕಿಳಿಸುವ ಯೋಜನೆ ತಯಾರಾಗುತ್ತಿದೆ.
ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಜೆಡಿಎಸ್ ನಾಯಕರು ಇನ್ನೂ ಗಮನಹರಿಸಿಲ್ಲ. ರೆಡ್ಡಿ ಅವರ ವಿರುದ್ಧ ಸೆಣಸಾಡುವ ಅಭ್ಯರ್ಥಿಯ ಹುಡುಕಾಟದಲ್ಲಿ ಜೆಡಿಎಸ್ ನಾಯಕರಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.