ಬೆಂಗಳೂರು: ಕಾಂಗ್ರೆಸ್ ಹಿಡಿತದಿಂದ ಜೆಡಿಎಸ್ ತೆಕ್ಕೆಗೆ ಹೊರಳಿದ್ದ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಕೆ. ಗೋಪಾಲಯ್ಯ ಅವರಿಂದಾಗಿ ಈಗ ಬಿಜೆಪಿ ಪ್ರಬಲ ಹಿಡಿತ ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಕೊರತೆ ದಟ್ಟವಾಗಿದ್ದರೆ, ಜೆಡಿಎಸ್‌ನಲ್ಲಿ ಟಿಕೆಟ್‌ಗೆ ಹಿಂದಿನಷ್ಟು ಪೈಪೋಟಿಯಿಲ್ಲ.
ಅಭಿವೃದ್ಧಿ ಹೊಂದಿದ ಪ್ರದೇಶಗಳು, ಕೊಳೆಗೇರಿಗಳು, ಇನ್ನೂ ಅಭಿವೃದ್ಧಿ ಹಂತದಲ್ಲಿರುವ ಪ್ರದೇಶಗಳ ಮಿಶ್ರಣದಂತಿರುವ ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೊಡಗಿದೆ. ಒಕ್ಕಲಿಗ ಮತದಾರರು ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಜಾತಿ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಜತೆಗಿನ ಸಂಪರ್ಕವೂ ನಿರ್ಣಾಯಕ ಪಾತ್ರ ವಹಿಸಲಿವೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಮಹಾಲಕ್ಷ್ಮಿ ಬಡಾವಣೆಯಲ್ಲಿ ಕಾಂಗ್ರೆಸ್‌ನ ನೆ.ಲ. ನರೇಂದ್ರಬಾಬು ಗೆಲುವು ಸಾಧಿಸಿದ್ದರು. ಅವರೀಗ ಬಿಜೆಪಿಯಲ್ಲಿದ್ದು, ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ನಂತರ 2013ರ ಚುನಾವಣೆಯಲ್ಲಿ ಜೆಡಿಎಸ್‌ನ ಕೆ. ಗೋಪಾಲಯ್ಯ ಜಯ ಗಳಿಸಿದ್ದರು. 2018 ರ ಚುನಾವಣೆಯಲ್ಲೂ ಫಲಿತಾಂಶ ಪುನರಾವರ್ತನೆಯಾಗಿತ್ತು. ಆದರೆ, ವರ್ಷದೊಳಗೆ ಗೋಪಾಲಯ್ಯ ಪಕ್ಷ ಬದಲಿಸಿ ಬಿಜೆಪಿ ಸೇರಿದ್ದರು. 2019 ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರಿ ಅಂತರದೊಂದಿಗೆ ಗೆಲುವು ಸಾಧಿಸಿದ್ದರು.
ಗೋಪಾಲಯ್ಯ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಕಣಕ್ಕಿಳಿಯಲು ಸಕಲ ತಯಾರಿ ನಡೆಸಿಕೊಂಡಿದ್ದಾರೆ. 2019ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಶಿವರಾಜು ಮತ್ತು ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಾ. ಗಿರೀಶ್ ಕೆ. ನಾಶಿ ಇಬ್ಬರೂ ಈ ಬಾರಿ ಕಣಕ್ಕಿಳಿಯುವ ಉಮೇದಿನಲ್ಲಿಲ್ಲ.
ಒಕ್ಕಲಿಗರ ಸಂಘದ ನಿರ್ದೇಶಕರೂ ಆಗಿರುವ ಮಲ್ಲೇಶ್ವರದ ವೇಗಸ್ ಆಸ್ಪತ್ರೆಯ ವೈದ್ಯ ಡಾ. ನಾರಾಯಣಸ್ವಾಮಿ ಒಬ್ಬರೇ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಜೆಡಿಎಸ್‌ನಿಂದ ಮುಖಂಡ ಸಿ. ರಾಜಣ್ಣ ಮತ್ತು ಬಿಬಿಎಂಪಿ ಮಾಜಿ ಉಪ ಮೇಯರ್ ಭದ್ರೇಗೌಡ ಆಕಾಂಕ್ಷಿಗಳಾಗಿದ್ದಾರೆ. ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಯಲು ಶಾಂತಲಾ ದಾಮ್ಲೆ ತಯಾರಿ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.