ADVERTISEMENT

ಯಶವಂತಪುರ ಕ್ರೇತ್ರ ಸ್ಥಿತಿ–ಗತಿ: ಸೋಮಶೇಖರ್‌ ಮಣಿಸಲು ‘ಕೈ’–‘ದಳ’ ತಂತ್ರ

ವಿಜಯಕುಮಾರ್ ಎಸ್.ಕೆ.
Published 14 ಜನವರಿ 2023, 20:23 IST
Last Updated 14 ಜನವರಿ 2023, 20:23 IST
ಎಸ್‌.ಟಿ.ಸೋಮಶೇಖರ್
ಎಸ್‌.ಟಿ.ಸೋಮಶೇಖರ್   

ಬೆಂಗಳೂರು: ಕಾಂಗ್ರೆಸ್‌ ತೆಕ್ಕೆಯಿಂದ ಬಿಜೆಪಿಗೆ ಹೊರಳಿರುವ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗ ಪಕ್ಷಕ್ಕಿಂತ ಶಾಸಕ ಎಸ್‌.ಟಿ.ಸೋಮಶೇಖರ್ ಹಿಡಿತ ಹೆಚ್ಚಿದೆ. ಮೂರು ಬಾರಿ ಪೈಪೋಟಿ ನೀಡಿ ಸೋತಿರುವ ಜೆಡಿಎಸ್ ಈ ಬಾರಿ ಪುಟಿದೇಳುವ ತವಕದಲ್ಲಿದ್ದರೆ, ಕಾಂಗ್ರೆಸ್‌ ಟಿಕೆಟ್ ಪಡೆಯಲು ಆಕಾಂಕ್ಷಿಗಳು ಸೆಣೆಸುತ್ತಿದ್ದಾರೆ.

ಹೆಸರಿಗಷ್ಟೆ ಇದು ಯಶವಂತಪುರ ವಿಧಾನಸಭಾ ಕ್ಷೇತ್ರ. ತುಮಕೂರು ರಸ್ತೆಯ ಚಿಕ್ಕಬಿದರಕಲ್ಲಿನಿಂದ ಆರಂಭವಾಗಿ ಮೈಸೂರು ರಸ್ತೆ ದಾಟಿ ಕನಕಪುರ ರಸ್ತೆ ಕಗ್ಗಲಿಪುರ ತನಕ, ಇತ್ತ ಮೈಸೂರು ರಸ್ತೆಯಲ್ಲಿ ಬಿಡದಿವರೆಗೆ, ಮಾಗಡಿ ರಸ್ತೆಯಲ್ಲಿ ತಿಪ್ಪಗೊಂಡನಹಳ್ಳಿ ಹತ್ತಿರಕ್ಕೆ ಈ ಕ್ಷೇತ್ರ ವ್ಯಾಪಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ವಿಸ್ತರಿಸಿಕೊಂಡಿರುವ ದೊಡ್ಡ ಕ್ಷೇತ್ರಗಳಲ್ಲಿ ಇದೂ ಒಂದು.

2008ಕ್ಕೂ ಮುನ್ನ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದೊಳಗಿದ್ದ ಈ ಕ್ಷೇತ್ರವು ಮರು ವಿಂಗಡಣೆ ಬಳಿಕ ಯಶವಂತಪುರ ವಿಧಾನಸಭಾ ಕ್ಷೇತ್ರವಾಯಿತು. ಒಕ್ಕಲಿಗ ಮತದಾರರ ಪ್ರಾಬಲ್ಯ ಇದ್ದು, 2008ರ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸೋಮಶೇಖರ್ ಸೋತಿದ್ದರು. 2013ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಸೋಮಶೇಖರ್ ಮತ್ತೆ ಸೋಲು ನೋಡಿಲ್ಲ. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ಆಪರೇಷನ್ ಕಮಲಕ್ಕೆ ಒಳಗಾದರು. ಬಿಜೆಪಿ ಸೇರಿ ಸಚಿವರೂ ಆದರು. ಬಳಿಕ 2019ರ ಆಗಸ್ಟ್‌ನಲ್ಲಿ ನಡೆದ ಉಪ ಚುನಾವಣೆಯಲ್ಲೂ ಗೆಲುವು ಕಂಡರು.

ADVERTISEMENT

ಇಲ್ಲಿ ಎಸ್.ಟಿ.ಸೋಮಶೇಖರ್‌ ಅವರಿಗೆ ಮೂರು ಬಾರಿಯೂ ಪ್ರಬಲ ಪೈಪೋಟಿ ನೀಡಿರುವುದು ಜೆಡಿಎಸ್‌ನ ಟಿ.ಎನ್.ಜವರಾಯಿಗೌಡ. ಈ ಬಾರಿಯೂ ಅವರನ್ನೇ ಕಣಕ್ಕಿಳಿಸಲು ಅವರ ಬೆಂಬಲಿಗರು ಸಜ್ಜಾಗಿದ್ದಾರೆ. ಸತತ ಸೋಲಿನಿಂದ ಬೇಸರಗೊಂಡಿರುವ ಅವರನ್ನು ಮತ್ತೊಮ್ಮೆ ಸ್ಪರ್ಧೆಗಳಿಸಲು ಕಾರ್ಯಕರ್ತರು ಉತ್ಸುಕರಾಗಿದ್ದಾರೆ. ಅನುಕಂಪದ ಮತಗಳು ದೊರಕುವ ವಿಶ್ವಾಸದಲ್ಲಿ ಕಾರ್ಯಕರ್ತರಿದ್ದಾರೆ.

ಇನ್ನೊಂದೆಡೆ ಚಿತ್ರನಟಿ ಭಾವನಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಲು ಆಕಾಂಕ್ಷಿಯಾಗಿದ್ದಾರೆ. ಟಿಕೆಟ್ ಬಯಸಿ ಅರ್ಜಿಯನ್ನೂ ಕೆಪಿಸಿಸಿಗೆ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲೂ ಓಡಾಟ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಕುಮಾರ್ ಅವರ ಮಗ ಕೃಷ್ಣಂ ರಾಜು, ಮುಖಂಡ ಬಾಲರಾಜುಗೌಡ ಕೂಡ ಕಾಂಗ್ರೆಸ್‌ ಟಿಕೆಟ್ ಬಯಸಿದ್ದಾರೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಎಸ್.ಟಿ.ಸೋಮಶೇಖರ್ ಸೋಲಿಸಲು ಇರುವ ತಂತ್ರಗಳನ್ನು ಕಾಂಗ್ರೆಸ್ ಹುಡುಕುತ್ತಿದೆ. ಅಲ್ಲದೇ, ಸೋಮಶೇಖರ್ ಅವರನ್ನೇ ವಾಪಸ್ ಕರೆತರಲು ಸಾಧ್ಯವೇ ಎಂಬ ಆಲೋಚನೆಯಲ್ಲೂ ಕಾಂಗ್ರೆಸ್ ಇದೆ. ಇನ್ನು ಆಮ್ ಆದ್ಮಿ ಪಕ್ಷದಿಂದ(ಎಎಪಿ) ಶಶಿಧರ್ ಆರಾಧ್ಯ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 2018ರ ಚುನಾವಣೆಯಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.