ADVERTISEMENT

ಜಯನಗರ ವಿಧಾನಸಭೆ ಕ್ಷೇತ್ರ ಸ್ಥಿತಿ–ಗತಿ: ಮತ್ತೆ ಹಿಡಿತಕ್ಕೆ ಬಿಜೆಪಿ ಶತಪ್ರಯತ್ನ

Published 23 ಜನವರಿ 2023, 13:19 IST
Last Updated 23 ಜನವರಿ 2023, 13:19 IST
ಸೌಮ್ಯಾರೆಡ್ಡಿ
ಸೌಮ್ಯಾರೆಡ್ಡಿ   

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ವಿಜಯಕುಮಾರ್‌ ಅವರ ವೈಯಕ್ತಿಕ ವರ್ಚಸ್ಸಿನಿಂದ ಬಿಜೆಪಿ ಎರಡು ಬಾರಿ ಜಯ ಸಾಧಿಸಿತ್ತು. ಹ್ಯಾಟ್ರಿಕ್‌ ಸಾಧಿಸುವ ವಿಶ್ವಾಸದಲ್ಲಿದ್ದ ವಿಜಯಕುಮಾರ್‌ ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದಾಗಲೇ ಮೃತಪಟ್ಟರು. ಹೀಗಾಗಿ ಚುನಾವಣೆಯನ್ನು ಒಂದು ತಿಂಗಳು ಮುಂದೂಡಲಾಗಿತ್ತು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ನಡೆದ ಚುನಾವಣೆಯಲ್ಲಿ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾರೆಡ್ಡಿ ಗೆಲುವು ಸಾಧಿಸಿದ್ದರು. ವಿಜಯಕುಮಾರ್‌ ಸೋದರ ಪ್ರಹ್ಲಾದ್‌ ಅವರಿಗೆ ಟಿಕೆಟ್‌ ನೀಡಿದ್ದ ಬಿಜೆಪಿ, ಅನುಕಂಪದ ಮತಪಡೆದು ಜಯಗಳಿಸುವ ಪ್ರಯತ್ನ ನಡೆಸಿತು. ಅದು ಕೈಗೂಡಲಿಲ್ಲ. ಹೀಗಾಗಿ ಈ ಬಾರಿ ಮತ್ತೆ ಕ್ಷೇತ್ರವನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಶತಪ್ರಯತ್ನ ಮಾಡುತ್ತಿದೆ. ಟಿಕೆಟ್‌ ಆಕಾಂಕ್ಷಿಗಳೂ ಹೆಚ್ಚಾಗಿದ್ದಾರೆ.

ಪ್ರತಿಷ್ಠಿತ ಬಡಾವಣೆಗಳನ್ನು ಒಳಗೊಂಡಿರುವ ಜಯನಗರ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಮುಂದಿದ್ದರೂ ಸಣ್ಣಪುಟ್ಟ ಲೋಪದೋಷಗಳಿಗೇನೂ ಕಡಿಮೆ ಇಲ್ಲ. ರಸ್ತೆ, ಗುಂಡಿ, ಚರಂಡಿಯಂತಹ ಸಮಸ್ಯೆಗಳು ಇದ್ದೇ ಇವೆ. ತ್ಯಾಜ್ಯ ನಿರ್ವಹಣೆಯ ಸಮಸ್ಯೆಗಳು ಆಗಾಗ್ಗೆ ಬೆಳಕಿಗೆ ಬರುತ್ತವೆ. ರಾಜಕಾಲುವೆ ಒತ್ತುವರಿಯಂತಹ ಪ್ರಮುಖ ಪ್ರಕರಣಗಳಿವೆ. ಬಿಜೆಪಿಯ ಕಾರ್ಪೊರೇಟರ್‌ಗಳೇ ಹೆಚ್ಚಿದ್ದ ಕ್ಷೇತ್ರ ಇದು. ಹೀಗಾಗಿ, ಈ ಬಾರಿಯ ವಿಧಾನಸಭಾ ಕ್ಷೇತ್ರದ ಚುನಾವಣೆ ಪೈಪೋಟಿ ಬೇರೆಯದ್ದೇ ರೀತಿಯದ್ದು ಎಂದು ಅಂದಾಜಿಸಲಾಗಿದೆ.

ADVERTISEMENT

‌ಕಾಂಗ್ರೆಸ್‌ ಸೌಮ್ಯಾರೆಡ್ಡಿ ಅವರಿಗೇ ಮತ್ತೆ ಟಿಕೆಟ್‌ ನೀಡುವ ಸಂಭವವಿದೆ. ಸಮ್ಮಿಶ್ರ ಸರ್ಕಾರವಿದ್ದುದ್ದರಿಂದ ಕಳೆದ ಬಾರಿ ಜೆಡಿಎಸ್‌ ಸ್ಪರ್ಧೆಯಿಂದ ಹಿಂದೆ ಸರಿದಿತ್ತು. ರಾಮಲಿಂಗಾರೆಡ್ಡಿ ಪುತ್ರಿ ಪರವಾಗಿ ಕ್ಷೇತ್ರದಲ್ಲಿ ಪ್ರಚಾರ ನಡೆಸಿತ್ತು. ಈ ಬಾರಿ ಚಿತ್ರಣ ಬದಲಾಗಲಿದೆ. ಜೆಡಿಎಸ್‌ ಸ್ಪರ್ಧಿಸಲಿದೆ.

ಕಳೆದ ಬಾರಿ ಸುಮಾರು ಎರಡು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಬಿಜೆಪಿ ಈ ಬಾರಿ ಕ್ಷೇತ್ರವನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಶತಪ್ರಯತ್ನ ನಡೆಸಿದೆ. ಮಾಜಿ ಕಾರ್ಪೊರೇಟರ್‌ಗಳು ಇದೀಗ ಮುಂಚೂಣಿಯಲ್ಲಿದ್ದಾರೆ. ಅಪ್ಪ– ಮಗಳ ಒಟ್ಟಾರೆ ಪ್ರಯತ್ನದಿಂದ ಕಳೆದ ಬಾರಿ ಗೆದ್ದ ಕಾಂಗ್ರೆಸ್‌ಗೆ ಪೈಪೋಟಿ ನೀಡಲು ಸನ್ನದ್ಧರಾಗಿದ್ದಾರೆ.

ವಿಜಯಕುಮಾರ್‌ ಅವರು ಚುನಾವಣೆಗೆ ಸ್ಪರ್ಧಿಸಿದ್ದಾಗಲೂ ಚುನಾವಣೆಯನ್ನು ನಿರ್ವಹಿಸುತ್ತಿದ್ದದ್ದು ಕಾರ್ಪೊರೇಟರ್‌ಗಳೇ. ಅದರಲ್ಲಿ ಸಿ.ಕೆ. ರಾಮಮೂರ್ತಿ ಮುಂದಿದ್ದು, ಕಾರ್ಪೊರೇಟರ್‌ ಆಗಿ ಮಾಡಿದ ಕಾರ್ಯ, ಅವರ ಪತ್ನಿ ಕಾರ್ಪೊರೇಟರ್ ಆಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಜೊತೆಗೆ ಇನ್ನೆರಡು ಕಾರ್ಪೊರೇಟರ್‌ಗಳ ಬೆಂಬಲದ ಜೊತೆಗೆ ಸಮುದಾಯದ ನೆರವು ಪ‍ಡೆದು ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಎನ್‌.ಆರ್‌. ರಮೇಶ್‌ ತಮ್ಮ ಹೋರಾಟಗಳ ಮೂಲಕವೇ ಪ್ರಚಾರದಲ್ಲಿದ್ದು, ಅವರು ಜಯನಗರ ಕ್ಷೇತ್ರವನ್ನು ಪ್ರಥಮ ಆಯ್ಕೆಯಾಗಿರಿಸಿಕೊಂಡಿದ್ದಾರೆ. ಇನ್ನು ಮೇಯರ್‌ ಆಗಿ ಇಮೇಜ್‌ ಬೆಳೆಸಿಕೊಂಡಿದ್ದ ಎಸ್‌.ಕೆ. ನಟರಾಜ್‌ ಅವರು 2008ರಲ್ಲಿಯೇ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಟಿಕೆಟ್‌ ಸಿಗದೆ ಬಂಡಾಯ ಅಭ್ಯರ್ಥಿಯೂ ಆಗಿದ್ದರು. ಭರವಸೆ ಮೇರೆಗೆ ಅಂದು ನಾಮಪತ್ರ ವಾಪಸ್‌ ಪಡೆದಿದ್ದರು. ಇದೀಗ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ರವಿ ಕೃಷ್ಣಾರೆಡ್ಡಿ ಕಳೆದ ಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂರನೇ ಅತಿ ಹೆಚ್ಚು ಮತ (1,861) ಪಡೆದಿದ್ದರು. ಜೆಡಿಎಸ್‌ನ ಕಾಳೇಗೌಡ ಕಳೆದ ಬಾರಿ ಸಮ್ಮಿಶ್ರ ಸರ್ಕಾರದ ಸೂಚನೆ ಮೇರೆಗೆ ಕಣದಿಂದ ಹಿಂದೆ ಸರಿದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.