ADVERTISEMENT

ವಿಜಯನಗರ ಕ್ಷೇತ್ರ ಸ್ಥಿತಿ – ಗತಿ: ಕೃಷ್ಣಪ್ಪ ಎದುರು ಸ್ಪರ್ಧೆಗೆ ಹೊಸಬರ ಪೈಪೋಟಿ

ಕರ್ನಾಟಕ ವಿಧಾನಸಭಾ ಚುನಾವಣೆ –2023

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 5:52 IST
Last Updated 14 ಜನವರಿ 2023, 5:52 IST
ಎಂ ಕೃಷ್ಣಪ್ಪ
ಎಂ ಕೃಷ್ಣಪ್ಪ    

ಬೆಂಗಳೂರು: ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಎಂ. ಕೃಷ್ಣಪ್ಪ ಒಬ್ಬರೇ ಆಕಾಂಕ್ಷಿ. ಜೆಡಿಎಸ್‌ನಲ್ಲಿ ಪ್ರಬಲ ಆಕಾಂಕ್ಷಿಗಳೇ ಇಲ್ಲ. ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಹೊಸಬರ ಪೈಪೋಟಿ

– ಇದು ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಮಿಶ್ರಣದಂತಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಸದ್ಯದ ಸ್ಥಿತಿ.

2008ರಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ವಿಜಯನಗರ ವಿಧಾನಸಭಾ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ನಿರಂತರ ಪ್ರಯತ್ನ ನಡೆಸುತ್ತಲೇ ಇದೆ. ಆದರೆ, ಸತತ ಮೂರು ಬಾರಿ ಗೆಲುವು ಸಾಧಿಸಿರುವ ಕೃಷ್ಣ‍ಪ್ಪ ಮತ್ತೆ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಅವರ ಹೊರತಾಗಿ ಆಕಾಂಕ್ಷಿಗಳಿಲ್ಲ. ಟಿಕೆಟ್‌ ಖಾತರಿಪಡಿಸಿಕೊಂಡಂತಿರುವ ಅವರು ಈಗಾಗಲೇ ಚುನಾವಣಾ ತಯಾರಿ ಆರಂಭಿಸಿದ್ದಾರೆ.

ADVERTISEMENT

2018ರಲ್ಲಿ ತೀವ್ರ ಪೈಪೋಟಿ ಎದುರಿಸಿದ್ದ ಕೃಷ್ಣಪ್ಪ, ಈ ಬಾರಿ ಹಲವು ತಿಂಗಳ ಹಿಂದೆಯೇ ಮತದಾರರ ಸಂಪರ್ಕ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದಾರೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಗಾಗ ಕ್ಷೇತ್ರಕ್ಕೆ ಕರೆತಂದು ಚುನಾವಣಾ ಕಾವು ಏರಿಸುತ್ತಿದ್ದಾರೆ.

ಬಿಜೆಪಿಯಲ್ಲಿ 2018ರ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಎಚ್‌. ರವೀಂದ್ರ ಮತ್ತೆ ಸ್ಪರ್ಧೆಗೆ ಆಕಾಂಕ್ಷಿ. ಎರಡು ಬಾರಿ ಬಿಬಿಎಂಪಿ ಸದಸ್ಯರಾಗಿದ್ದ ಉಮೇಶ್‌ ಶೆಟ್ಟಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಗೌಡ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ವಿಜಯನಗರ ಕ್ಷೇತ್ರದಲ್ಲಿ ಈ ಬಾರಿ ಟಿಕೆಟ್‌ಗಾಗಿ ಹಿಂದೆಂದಿಗಿಂತ ಹೆಚ್ಚು ಪೈಪೋಟಿ ಇದೆ.

ಎಲ್ಲರೂ ಆಪ್ತರ ಮೂಲಕ ಬಿಜೆಪಿ ವರಿಷ್ಠರ ಮನವೊಲಿಕೆಯಲ್ಲಿ ನಿರತರಾಗಿದ್ದಾರೆ. ನೆರೆಯ ಗೋವಿಂದರಾಜನಗರ ಕ್ಷೇತ್ರದ ಶಾಸಕರೂ ಆಗಿರುವ ವಸತಿ ಸಚಿವ ವಿ. ಸೋಮಣ್ಣ ಬೆಂಬಲವೂ ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಮೂಲಸೌಕರ್ಯ ಅಭಿವೃದ್ಧಿ, ಜಾತಿ ಮತ್ತು ಕೋವಿಡ್‌ ಸಂಕಷ್ಟದ ಅವಧಿಯಲ್ಲಿ ಜನರ ನೆರವಿಗೆ ನಿಂತ ವಿಚಾರಗಳು ಈ ಕ್ಷೇತ್ರದಲ್ಲೂ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದ ‘ಫಲ’ ಪಡೆಯಲು ಶಾಸಕ ಕೃಷ್ಣಪ್ಪ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿಯೂ ಆರಂಭವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.