ADVERTISEMENT

ಸಾಕ್ಷಾತ್‌ ಸಮೀಕ್ಷೆ – ಬ್ಯಾಟರಾಯನಪುರ: ಕಾಂಗ್ರೆಸ್‌ ಕ್ಷೇತ್ರ ಕಸಿಯಲು ಬಿಜೆಪಿ ಯತ್ನ

ಬ್ಯಾಟರಾಯನಪುರ ಕ್ಷೇತ್ರ: ಅಸ್ತಿತ್ವಕ್ಕೆ ಜೆಡಿಎಸ್‌ ಕಸರತ್ತು

ಸಚ್ಚಿದಾನಂದ ಕುರಗುಂದ
Published 6 ಮೇ 2023, 20:08 IST
Last Updated 6 ಮೇ 2023, 20:08 IST
   

ಬೆಂಗಳೂರು: ಉತ್ತರ ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. 

ರಾಜ್ಯದ ಅತಿ ದೊಡ್ಡ ಕ್ಷೇತ್ರಗಳ ಪೈಕಿ ಒಂದಾದ ಬ್ಯಾಟರಾಯನಪುರ, ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಿದೆ. ಗೆಲುವಿನ ದಡ ಸೇರುವ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಕೃಷ್ಣ ಬೈರೇಗೌಡ ಅವರಿಗೆ ಬಿಜೆಪಿ ಅಭ್ಯರ್ಥಿ ಎಚ್‌.ಸಿ. ತಮ್ಮೇಶಗೌಡ ಸ್ಪರ್ಧೆಯೊಡ್ಡಿದ್ದಾರೆ. 

ಇದುವರೆಗೆ ಒಟ್ಟು ಐದು ಬಾರಿ ಶಾಸಕರಾಗಿರುವ ಕೃಷ್ಣ ಬೈರೇಗೌಡ ಅವರು ಬ್ಯಾಟರಾಯನಪುರ ಕ್ಷೇತ್ರದಲ್ಲೇ 2008ರಿಂದ ಸತತ ಮೂರು ಬಾರಿ ಜಯಭೇರಿ ಬಾರಿಸಿದ್ದಾರೆ. ಸಚಿವರಾಗಿಯೂ ಕಾರ್ಯನಿರ್ವಹಿಸಿ ಕ್ಷೇತ್ರವನ್ನು ಭದ್ರಕೋಟೆ ಮಾಡಿಕೊಂಡಿರುವ ಕೃಷ್ಣ ಬೈರೇಗೌಡ ಅವರು, ಈ ಬಾರಿಯೂ ಮರು ಆಯ್ಕೆ ಬಯಸಿದ್ದಾರೆ.

ADVERTISEMENT

ಕೃಷ್ಣ ಬೈರೇಗೌಡರ ಗೆಲುವಿನ ನಾಗಾಲೋಟ ತಡೆಯಲು ಬಿಜೆಪಿ ಈಗ ಭಾರಿ ಕಸರತ್ತು ನಡೆಸುತ್ತಿದೆ. ಆದರೆ, ಆರಂಭದಲ್ಲೇ ಆಕಾಂಕ್ಷಿಗಳು ಹೆಚ್ಚಾಗಿದ್ದರಿಂದ ಗೊಂದಲ ಸೃಷ್ಟಿಯಾಗಿ ಬಿಜೆಪಿ ಟಿಕೆಟ್‌ ನೀಡುವಲ್ಲಿ ವಿಳಂಬ ಮಾಡಿತು. ಕಳೆದ ಬಾರಿ ಸ್ಪರ್ಧಿಸಿ, ಪರಾಭವಗೊಂಡಿದ್ದ ಸಚಿವ ಆರ್‌. ಅಶೋಕ ಅವರ ಸೋದರ ಸಂಬಂಧಿ ಎ. ರವಿ ಈ ಬಾರಿಯೂ ಆಕಾಂಕ್ಷಿಯಾಗಿ ಕಣವನ್ನು ಸಜ್ಜುಗೊಳಿಸಿಕೊಂಡಿದ್ದರು. ಹಿಂದಿನ ಮೂರು ಚುನಾವಣೆಗಳಲ್ಲಿಯೂ ಎ. ರವಿ ಅವರೇ ಕೃಷ್ಣ ಬೈರೇಗೌಡ ವಿರುದ್ಧ ಸ್ಪರ್ಧಿಸಿದ್ದರು. 2018ರ ಚುನಾವಣೆಯಲ್ಲಿ ಕೃಷ್ಣೇ ಬೈರೇಗೌಡ ಅವರು ಕೇವಲ 5,671 ಮತಗಳ ಅಂತರದಿಂದ ಆಯ್ಕೆಯಾಗಿದ್ದರು. ಕೃಷ್ಣ ಬೈರೇಗೌಡ ಅವರು 1,14,964 ಮತಗಳು ಮತ್ತು ಎ. ರವಿ 1,09,293 ಮತಗಳನ್ನು ಪಡೆದಿದ್ದರು. ಜೆಡಿಎಸ್‌ ಕೇವಲ 22,490 ಮತಗಳನ್ನು ಪಡೆದಿತ್ತು.

ಬಿಜೆಪಿ ಮಂಡಲ ಅಧ್ಯಕ್ಷ ಕೆ.ಎ. ಮುನೀಂದ್ರ ಕುಮಾರ್‌ ಅವರು ಸಹ ಈ ಬಾರಿ ಆಕಾಂಕ್ಷಿಯಾಗಿದ್ದರು. ಅವರಿಬ್ಬರನ್ನು ಬದಿಗಿಟ್ಟ ಬಿಜೆಪಿ ಎಚ್‌.ಸಿ. ತಮ್ಮೇಶಗೌಡರಿಗೆ ಮಣೆ ಹಾಕಿದೆ. ತಮ್ಮೇಶಗೌಡ ಅವರು ಪಕ್ಷದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಆಪ್ತರು. ತಮ್ಮೇಶಗೌಡ ಅವರನ್ನು ಗೆಲ್ಲಿಸಬೇಕು ಎನ್ನುವ ಪಣ ತೊಟ್ಟಿರುವ ವಿಜಯೇಂದ್ರ ಅವರು ವಿವಿಧ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಮುನಿಸು ಮರೆತಿರುವ ಎಲ್ಲ ಆಕಾಂಕ್ಷಿಗಳು, ತಮ್ಮೇಶಗೌಡ ಪರ ಪ್ರಚಾರ ಕೈಗೊಂಡಿದ್ದಾರೆ. ತಮ್ಮೇಶಗೌಡ ಅವರು ಸಹ ಆಂತರಿಕ ಭಿನ್ನಮತ ಶಮನ ಮಾಡುವಲ್ಲಿ ಯಶಸ್ವಿಯಾದಂತೆ ಮೇಲ್ನೋಟಕ್ಕೆ ಕಾಣಿಸುತ್ತಿದೆ. ಆದರೆ, ಕೊನೆಗಳಿಗೆಯಲ್ಲಿ ಒಳೇಟುಗಳು ಬೀಳುವುದಿಲ್ಲ ಎಂಬ ಅನುಮಾನವಂತೂ ಹೋಗಿಲ್ಲ ಎಂಬ ಮಾತುಗಳೂ ಇವೆ.

ಜೆಡಿಎಸ್‌ ಕೊನೆಯ ಕ್ಷಣದಲ್ಲಿ ಪಿ. ನಾಗರಾಜು ಅವರನ್ನು ಕಣಕ್ಕಿಳಿಸಿದೆ. ಕ್ಷೇತ್ರದ ಹೊರಗಿನವರಾದ ನಾಗರಾಜು ಅವರು ಜೆಡಿಎಸ್‌ ವರಿಷ್ಠರಾದ ಎಚ್‌.ಡಿ. ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಅವರ ನಾಯಕತ್ವದ ಮೇಲೆ ಹೆಚ್ಚು ಅವಲಂಬನೆಯಾಗಿದ್ದಾರೆ. 

ಕಣದಲ್ಲಿ ಒಟ್ಟು 17 ಅಭ್ಯರ್ಥಿಗಳಿದ್ದು, ಆಮ್‌ ಆದ್ಮಿ ಪಕ್ಷದಿಂದ ಕೆ. ಗಿರೀಶ್‌ ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ, ಮೂರು ಪಕ್ಷಗಳು ಒಕ್ಕಲಿಗರನ್ನೇ ಕಣಕ್ಕಿಳಿಸಿವೆ. ಮುಸ್ಲಿಮರು, ಪರಿಶಿಷ್ಟರ ಮತಗಳು ಈ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಜತೆಗೆ, ವಿವಿಧ ಭಾಷೆಗಳ ಜನರು ಸಹ ಇಲ್ಲಿ ನೆಲೆಸಿದ್ದಾರೆ.

ಮೂರು ಅವಧಿಯಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮತ್ತು ವೈಯಕ್ತಿಕ ವರ್ಚಸ್ಸು ನೆಚ್ಚಿಕೊಂಡಿರುವ ಕೃಷ್ಣ ಬೈರೇಗೌಡ ಅವರು, ರಾಜ್ಯ ಸರ್ಕಾರಗಳ ವೈಫಲ್ಯಗಳನ್ನು ಬಿಂಬಿಸುವ ಮೂಲಕ ಮತದಾರರನ್ನು ಓಲೈಸಲು ಹಲವಾರು ರೀತಿಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ.

ಕ್ಷೇತ್ರದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದೆ ಎನ್ನುವ ಆರೋಪಗಳೊಂದಿಗೆ ಮತ್ತು ಸರ್ಕಾರದ ಸಾಧನೆಗಳನ್ನು ಬಿಂಬಿಸಿ ಬಿಜೆಪಿ ಅಭ್ಯರ್ಥಿ ಪ್ರಚಾರ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.