ಬೆಂಗಳೂರು: ‘ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ದೇಶದ ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ₹15 ಲಕ್ಷ ಹಾಕುವುದಾಗಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ, ಒಬ್ಬರಿಗೂ ಹಣ ಹಾಕಿಲ್ಲ’ ಎಂಬ ಕಾಂಗ್ರೆಸ್‌ನ ಎನ್.ಎಚ್. ಕೋನರಡ್ಡಿ ಮಾತು ವಿಧಾನಸಭೆಯಲ್ಲಿ ಗುರುವಾರ ಕೋಲಾಹಲಕ್ಕೆ ಕಾರಣವಾಯಿತು.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೋನರಡ್ಡಿ, ‘ನಮ್ಮ ಸರ್ಕಾರ ಗ್ಯಾರಂಟಿ ಅನುಷ್ಠಾನ ಮಾಡಿಲ್ಲ ಎಂದು ಟೀಕಿಸುತ್ತಿದ್ದೀರಿ. ಮೋದಿಯವರು ಕೊಟ್ಟ ಮಾತಿನಂತೆ ₹15 ಲಕ್ಷ ಕೊಟ್ಟಿದ್ದಾರಾ?’ ಎಂದು ಪ್ರಶ್ನಿಸಿದರು.
ಆ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ದಾಖಲೆ ಇಲ್ಲದೆ ಬೋಗಸ್ ಮಾತನಾಡಬಾರದು. ಮೋದಿಯವರು ಹಾಗೆ ಹೇಳಿದ್ದರೆ ದಾಖಲೆ ಕೊಡಿ. ನಾವೇ ಹೋಗಿ ಕೇಳುತ್ತೇವೆ’ ಎಂದರು.
‘ಈ ವಿಚಾರದಲ್ಲಿ ಪದೇ ಪದೇ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯಾವುದೇ ವಿಡಿಯೊ ತುಣುಕು ಇದ್ದರೆ ಇಲ್ಲೇ ಪ್ರದರ್ಶಿಸಲಿ’ ಎಂದು ಬಿಜೆಪಿಯ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.
ಸಹಕಾರ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ಕಾಂಗ್ರೆಸ್‌ನ ಹಲವರು ಕೋನರಡ್ಡಿ ಬೆಂಬಲಕ್ಕೆ ನಿಂತರು. ಬಿಜೆಪಿ ಸದಸ್ಯರು ವಿಡಿಯೊ ಒದಗಿಸುವಂತೆ ಪಟ್ಟು ಹಿಡಿದರು. ಗದ್ದಲ ಜೋರಾಗುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಸ್ಪೀಕರ್ ಯು.ಟಿ. ಖಾದರ್, ‘ಸುಮ್ಮನೆ ಕುಳಿತುಕೊಳ್ಳಿ. ಈಗ ವಿಡಿಯೊ ತೋರಿಸಿ ಎಂದರೆ ನಾನು ಎಲ್ಲಿಂದ ತರುವುದು. 2013ರಿಂದ ಈಚೆಗೆ ಏನೆಲ್ಲಾ ಆಗಿದೆ ಎಂಬುದನ್ನು ಹುಡುಕಿದರೆ ಸಿಗಬಹುದು’ ಎಂದು ಕೋಲಾಹಲ ತಣ್ಣಗಾಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.