ADVERTISEMENT

ಪುರುಷರ ಮನಃಸ್ಥಿತಿ ಬದಲಿಸುವ ಕೆಲಸ ಆಗಬೇಕು: ಸಂಧ್ಯಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 15:48 IST
Last Updated 23 ಜೂನ್ 2024, 15:48 IST
<div class="paragraphs"><p>ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ</p></div>

ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ

   

–ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪುರುಷ ಪ್ರಧಾನ ಸಮಾಜದಲ್ಲಿ ಇಂದಿಗೂ ಸ್ತ್ರೀಯರ ಬಗೆಗಿನ ಮನಃಸ್ಥಿತಿ ಬದಲಾಗಿಲ್ಲ. ಆದ್ದರಿಂದ ಪುರುಷರ ಮನಃಸ್ಥಿತಿ ಬದಲಿಸುವ ಕೆಲಸ ಮಾಡಬೇಕು’ ಎಂದು ಲೇಖಕಿ ಕೆ.ಆರ್. ಸಂಧ್ಯಾರೆಡ್ಡಿ ಹೇಳಿದರು. 

ADVERTISEMENT

ಕರ್ನಾಟಕ ಲೇಖಕಿಯರ ಸಂಘ ನಗರದಲ್ಲಿ ಭಾನುವಾರ ಹಮ್ಮಿಕೊಂಡ ‘2023ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿ’ಗಳ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಸಮಾನತೆಯನ್ನು ಎತ್ತಿಹಿಡಿದ ಬಸವಣ್ಣ ಅವರೂ ‘ನಾರಿಗೆ ಗುಣವೇ ಶೃಂಗಾರ’ವೆಂದು ಹೇಳಿದ್ದರು. ಅಂದರೆ, ಗುಣ ನಾರಿಗೆ ಮಾತ್ರವೇ ಅಂದಂತೆ ಆಗುತ್ತದೆ. ಕನಕದಾಸರು ‘ಸ್ತ್ರೀ ರೂಪ ಕಣ್ಣಿಗೆ ಕಾಣದಂತೆ ಮಾಡು’ ಎಂದಿದ್ದರು. ಇತ್ತೀಚೆಗೆ, ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ ಆಟೊ ಚಾಲಕರೊಬ್ಬರು ಹೆಂಗಸರದ್ದೇ ತಪ್ಪು, ಅವರೇಕೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು. ಸ್ತ್ರೀಯರ ಬಗೆಗಿನ ಮನಃಸ್ಥಿತಿ ಬದಲಾಗಿಲ್ಲ ಎನ್ನುವುದನ್ನು ಈ ಮಾತಿನಲ್ಲಿ ಕಾಣಬಹುದಾಗಿದೆ’ ಎಂದರು. 

‘ಮಹಿಳೆಯರು ಸಾಂಸಾರಿಕ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡು, ಸಾಹಿತ್ಯ ಕ್ಷೇತ್ರಕ್ಕೆ ಬರುವಷ್ಟರಲ್ಲಿ ವಯಸ್ಸಾಗಿರುತ್ತದೆ. ಲೇಖಕಿಯರ ಸಾಹಿತ್ಯ ಗಮನಿಸಿದರೆ ಇದು ನಮಗೆ ತಿಳಿಯುತ್ತದೆ. ಎಷ್ಟೋ ಮಹಿಳೆಯರು ತಮ್ಮ ಅಭಿವ್ಯಕ್ತಿಯನ್ನು ಅಡಗಿಸಿಕೊಂಡು, ಜೀವನದ ಕಡೆಯ ಘಟ್ಟದಲ್ಲಿ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸುತ್ತಾರೆ’ ಎಂದರು. 

ಕವಿ ಎಚ್.ಎಸ್.ಶಿವಪ್ರಕಾಶ್, ‘ಕಾವ್ಯದಲ್ಲಿ ಸಾರ್ವಕಾಲಿಕ ಪ್ರಸ್ತುತತೆ ಇರಬೇಕು. ಕಾಯಿ ಮಾಗುವವರೆಗೆ ನಾವು ಕಾಯಬೇಕಾಗುತ್ತದೆ. ಮಾಗುವ ಶಕ್ತಿ ಎಲ್ಲ ಬರಹಗಾರರಿಗೆ ಅಗತ್ಯ. ವಾಸ್ತವದಲ್ಲಿ ಸಾಹಿತ್ಯಕ್ಕೆ ಜಾತಿ, ಲಿಂಗವಿಲ್ಲ. ಆದರೆ, ಕೆಲವು ಸಲ ಬರಹವನ್ನು ಮಹಿಳೆ ಬರೆದದ್ದೋ, ಪುರುಷ ಬರೆದದ್ದೋ ಎಂದು ನೋಡುತ್ತೇವೆ. ನನ್ನ ಮೇಲೆ ಪುರುಷ ಲೇಖಕರಷ್ಟೇ ಅಕ್ಕಮಹಾದೇವಿ ಸೇರಿ ಅನೇಕ ಲೇಖಕಿಯರು ಪ್ರಭಾವ ಬೀರಿದ್ದಾರೆ. ಮಹಿಳಾ ಸಾಹಿತ್ಯವನ್ನು ಪುರುಷ ಸಾಹಿತ್ಯದ ವಿರೋಧಿಯೆಂದು ಗುರುತಿಸದೆ, ಸಾಹಿತ್ಯದ ಆವಿಷ್ಕಾರವೆಂದು ಗೌರವಿಸಿ ಪ್ರೋತ್ಸಾಹಿಸಬೇಕು’ ಎಂದು ತಿಳಿಸಿದರು. 

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ‘ಸುಧಾ’ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಚ.ಹ. ರಘುನಾಥ ಉಪಸ್ಥಿತರಿದ್ದರು.

ವಿವಿಧ ಲೇಖಕಿಯರಿಗೆ ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ ಚಂದ್ರಮತಿ ಸೋಂದಾ ಅವರಿಗೆ ‘ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ’ ಬಿ. ರೇವತಿ ನಂದನ್ ಅವರಿಗೆ ‘ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ ಸರಸ್ವತಿ ಭೋಸಲೆ ಅವರಿಗೆ ‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ ವಿಜಯಾ ಶಂಕರ ಅವರಿಗೆ ‘ಜಿ.ವಿ. ನಿರ್ಮಲ ಪ್ರಶಸ್ತಿ’ ಮಾಧವಿ ಭಂಡಾರಿ ಕೆರೆಕೋಣ ಅವರಿಗೆ ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ ನೂತನ ದೋಶೆಟ್ಟಿ ಅವರಿಗೆ ‘ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) ಪ್ರಶಸ್ತಿ’ ಸುಮಾ ರಮೇಶ್ ಅವರಿಗೆ ‘ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿ’ ಪ್ರದಾನ ಮಾಡಲಾಯಿತು.  ಕಾವ್ಯಾ ಕಡಮೆ ಅವರಿಗೆ ‘ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿ’ ಲೀಲಾ ವಾಸುದೇವ್ ಅವರಿಗೆ ‘ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿ’ ಸುಧಾ ಆಡುಕಳ ಸಿಂಧುಚಂದ್ರ ಅವರಿಗೆ ‘ತ್ರಿವೇಣಿ ದತ್ತಿನಿಧಿ’ ಬಹುಮಾನ ಶೋಭಾ ನಾಯಕ ಅವರಿಗೆ ಉಷಾ. ಪಿ.ರೈ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿ ಮಾಲತಿ ಹೆಗಡೆ ಮಂಜುಳಾ ಗೋನಾಳ ಅವರಿಗೆ ‘ನಿರುಪಮಾ ಕಥಾ ಪ್ರಶಸ್ತಿ’ ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ‘ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ ದೇವಿಕಾ ನಾಗೇಶ್ ಅವರಿಗೆ ‘ಶ್ರೀಲೇಖಾ (ಕಾವ್ಯ ಪ್ರಶಸ್ತಿ) ಪ್ರಶಸ್ತಿ’ ಮಂಜುಳಾ ಹಿರೇಮಠ ಅವರಿಗೆ ‘ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ ಹಾಗೂ ಅಕ್ಷತಾ ಹುಂಚದಕಟ್ಟೆ ಅವರಿಗೆ ‘ಪ್ರೇಮಾಭಟ್ಟ ಮತ್ತು ಎ.ಎಸ್.ಭಟ್ಟ ಪ‍್ರಶಸ್ತಿ’ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.