ಬೆಂಗಳೂರು: ಬಿಟ್‌ಕಾಯಿನ್ ಹ್ಯಾಕಿಂಗ್ ಕುರಿತ ತನಿಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಸಾಕ್ಷಿದಾರರಾಗಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ.
ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಿದ್ದ ಶ್ರೀಕಿ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 164ರ ಅಡಿಯಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಡಿವೈಎಸ್‌ಪಿ ಶ್ರೀಧರ್ ಕೆ.ಪೂಜಾರ್, ಇನ್‌ಸ್ಪೆಕ್ಟರ್ ಪ್ರಶಾಂತ್ ಬಾಬು ತನಿಖೆಯ ವೇಳೆ ಅಕ್ರಮ ನಡೆಸಿದ್ದಾರೆ ಎಂದು ಆರೋಪ ಮಾಡಿದ್ದಾರೆ.
2020ರಲ್ಲಿ ಬಿಟ್‌ಕಾಯಿನ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಸಿಸಿಬಿ ತನಿಖಾಧಿಕಾರಿಗಳು, ಶ್ರೀಕಿ ಬಳಿ ಜಪ್ತಿ ಮಾಡಿದ್ದ ಎಲೆಕ್ಟ್ರಾನಿಕ್ ಉಪಕರಣಗಳ ದತ್ತಾಂಶ ತಿರುಚಿದ್ದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಸಿಐಡಿ ಎಸ್‌ಐಟಿ ಚುರುಕುಗೊಳಿಸಿದೆ.
‘ಶ್ರೀಧರ್ ಕೆ.ಪೂಜಾರ್ ಅವರು ಎನ್‌ಕೌಂಟರ್ ಮಾಡುವುದಾಗಿ ಬೆದರಿಸಿ ನನ್ನ ಮ್ಯಾಕ್‌ಬುಕ್ ವ್ಯಾಲೆಟ್ ಪಾಸ್‌ವರ್ಡ್ ಹಾಗೂ ಎಡಬ್ಲ್ಯೂಎಸ್ ಕ್ಲೌಡ್ ಅಕೌಂಟ್ ಪಾಸ್‌ವರ್ಡ್ ಪಡೆದಿದ್ದರು. ನನ್ನ ಮನೆಯಲ್ಲಿ ಜಪ್ತಿ ಮಾಡಿದ್ದ ಡಿಜಿಟಲ್ ವಸ್ತುಗಳ ಜಪ್ತಿಗೆ ಸಂಬಂಧಿಸಿದ ಮಹಜರಿನ ವೇಳೆ ಸಾಕ್ಷಿಗಳ ಹೇಳಿಕೆ ದಾಖಲಿಸಿರಲಿಲ್ಲ. ಜಪ್ತಿ ಮಾಡಿದ್ದ ಡಿಜಿಟಲ್ ವಸ್ತುಗಳ ದತ್ತಾಂಶವನ್ನು ಶ್ರೀಧರ್ ಪೂಜಾರ್ ಹಾಗೂ ಪ್ರಶಾಂತ್ ಬಾಬು ತಿರುಚಿದ್ದಾರೆ’ ಎಂಬುದಾಗಿ ಶ್ರೀಕಿ ನ್ಯಾಯಾಲಯದ ಎದುರು ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಟ್ ಕಾಯಿನ್ ಹ್ಯಾಕಿಂಗ್‌ಗೆ ಸಂಬಂಧಿಸಿದಂತೆ ಸಿಐಡಿ ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿದ್ದ ಮೊದಲ ಪ್ರಕರಣದಲ್ಲಿ ಸೈಬರ್ ತಜ್ಞ ಸಂತೋಷ್ ಕುಮಾರ್ ಹಾಗೂ ಮೂವರು ಪೊಲೀಸ್ ಅಧಿಕಾರಿಗಳನ್ನು ಎಸ್‌ಐಟಿ ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.