ಬೆಂಗಳೂರು: ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆಲ್ಲುವ ಗುರಿಯೊಂದಿಗೆ ಪಕ್ಷದ ಸಂಘಟನೆ, ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ನಾನಾ ರೀತಿಯ ಹೋರಾಟ, ಕೇಂದ್ರ ಸರ್ಕಾರದ ಸಾಧನೆ ಪರಿಚಯಿಸಲು ಮನೆ ಮನೆ ಪ್ರಚಾರ ಹಮ್ಮಿಕೊಳ್ಳಲು ಶನಿವಾರ ನಡೆದ ಬಿಜೆಪಿಯ ವಿಶೇಷ ರಾಜ್ಯ ಕಾರ್ಯಕಾರಿಣಿ ನಿರ್ಧಾರ ಕೈಗೊಂಡಿದೆ.
ಬಿ.ವೈ. ವಿಜಯೇಂದ್ರ ರಾಜ್ಯ ಘಟಕದ ಅಧ್ಯಕ್ಷರಾದ ಬಳಿಕ ನಡೆದ ಮೊದಲ ಕಾರ್ಯಕಾರಿಣಿ ಸಭೆ ಇದಾಗಿದೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ಮೇಲೆ, ಪಕ್ಷ ಅಥವಾ ಸರ್ಕಾರದ ಕಾರ್ಯಕ್ರಮಗಳಲ್ಲಿ ಅವರಿಗೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿರಲಿಲ್ಲ. ಕಾರ್ಯಕಾರಿಣಿಯ ನಡಾವಳಿ, ಭಾವಚಿತ್ರಗಳು, ಫ್ಲೆಕ್ಸ್‌ಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಯಡಿಯೂರಪ್ಪ, ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರೇ ರಾರಾಜಿಸುತ್ತಿದ್ದರು. ಬಿಜೆಪಿಯಲ್ಲಿ ಮತ್ತೆ ಯಡಿಯೂರಪ್ಪ ಮೇಲುಗೈ ಸಾಧಿಸಿರುವುದನ್ನು ಈ ಕಾರ್ಯಕಾರಿಣಿ ಬಿಂಬಿಸಿತು.
ಬಿಜೆಪಿಯ ತತ್ವ, ಸಿದ್ಧಾಂತವನ್ನು ಒಪ್ಪಿ ಬರುವ ನಾಯಕರನ್ನು ಸ್ವಾಗತಿಸುವ ಜತೆಗೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸುವ ನಿರ್ಣಯವನ್ನೂ ಸಭೆ ಕೈಗೊಂಡಿತು.
‘ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕೈ ಬಲಪಡಿಸುವುದೇ ನಮ್ಮ ಮೊದಲ ಆದ್ಯತೆ. ಅಭ್ಯರ್ಥಿ ಯಾರೆಂದು ವರಿಷ್ಠರು ತೀರ್ಮಾನಿಸುತ್ತಾರೆ. ಯಾರೇ ಅಭ್ಯರ್ಥಿಯಾಗಲಿ ಅವರನ್ನು ಗೆಲ್ಲಿಸುವುದಕ್ಕೆ ಎಲ್ಲರೂ ಶ್ರಮವಹಿಸಬೇಕು. ಬಗ್ಗೆ ವೀಕ್ಷಕರು ಹಾಗೂ ಉಸ್ತುವಾರಿಗಳು ಕ್ಷೇತ್ರಕ್ಕೆ ಭೇಟಿ ನೀಡಿದಾಗ ಅಭ್ಯರ್ಥಿ ಯಾರಾಗಬೇಕು ಎಂಬುದರ ಅಭಿಪ್ರಾಯ ನೀಡಬಹುದು. 28 ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿಯಾಗಬೇಕು’ ಎಂದು ನಾಯಕರು, ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಕಾರ್ಯಕಾರಿಣಿ ಉದ್ಘಾಟಿಸಿದ ಕೇಂದ್ರ ಪರಿಸರ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್, ‘ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸಗಢದ ಜನರು ಕಾಂಗ್ರೆಸ್ ಸುಳ್ಳಿನ ಗ್ಯಾರಂಟಿಯನ್ನು ತಿರಸ್ಕರಿಸಿದ್ದರು. ಮೂರು ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಆತ್ಮವಿಶ್ವಾಸ ಕಳೆದುಕೊಂಡಿದೆ. ಪಶ್ಚಿಮ ಬಂಗಾಳ ಹಾಗೂ ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಇನ್ನಷ್ಟು ಹತಾಶೆಗೆ ಒಳಗಾಗಿದೆ. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದ್ದು, 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲಿದೆ’ ಎಂದು ಹೇಳಿದರು.
‘ಬಿಜೆಪಿಯದ್ದು ‘ನೈಜ ಗ್ಯಾರಂಟಿ’ ಎಂದು ದೇಶದ ಜನರು ಅರ್ಥೈಸಿಕೊಂಡಿದ್ದಾರೆ. ಕಾಂಗ್ರೆಸ್‌ನದ್ದು ಬರೀ ಸುಳ್ಳಿನ ಗ್ಯಾರಂಟಿ. ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ದ್ರೋಹ ಎಸಗುತ್ತಿದೆ. ಕಾಂಗ್ರೆಸ್ ಸುಳ್ಳಿನ ಕಂತೆಯ ಬಗ್ಗೆ ಚುನಾವಣಾ ಪ್ರಚಾರದ ವೇಳೆ ಜನರಿಗೆ ನಮ್ಮ ಕಾರ್ಯಕರ್ತರು ಮನವರಿಕೆ ಮಾಡಿಕೊಡಬೇಕು’ ಎಂದೂ ಕರೆ ನೀಡಿದರು.
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ‘ಕಳೆದ ಚುನಾವಣೆಯಲ್ಲಿ 26 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿತ್ತು. ಈ ಬಾರಿ 28 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ. ಲೋಕಸಭೆ ಚುನಾವಣೆ ನಮಗೆ ಬಹುದೊಡ್ಡ ತಿರುವಿನ ಸತ್ವ ಪರೀಕ್ಷೆ’ ಎಂದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ಈ ಸರ್ಕಾರಕ್ಕೆ ಬರಗಾಲದಲ್ಲಿ ರೈತರ ಕಣ್ಣೀರು ಒರೆಸಲು ಆಗಿಲ್ಲ. ಹೆಣ್ಣು ಮಕ್ಕಳ ಮಾನ ರಕ್ಷಿಸಲು ಸಾಧ್ಯವಾಗಿಲ್ಲ. ಸರ್ಕಾರದ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ., ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಶಾಸಕ ಬಸವರಾಜ ಬೊಮ್ಮಾಯಿ, ಸಿ.ಎನ್.ಅಶ್ವತ್ಥನಾರಾಯಣ್, ಮುಖಂಡರಾದ ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ, ಸಂಸದ ನಳಿನ್‍ಕುಮಾರ್ ಕಟೀಲ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇದ್ದರು. ಇದೇ ವೇಳೆ ಲೇಖಕ ಪ್ರಕಾಶ್ ಶೇಷರಾಘವಾಚಾರ್ ಅವರು ಬರೆದು ‘ಬದಲಾದ ಭಾರತ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.
ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕ್ಷೇತ್ರಕ್ಕೆ ಒಬ್ಬ ಉಸ್ತುವಾರಿ ಹಾಗೂ ಸಂಚಾಲಕರನ್ನು ನೇಮಕ ಮಾಡಲಾಗಿದೆ. ಮಾಜಿ ಸಚಿವರು, ಶಾಸಕರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳಿಗೆ ಇದರ ಹೊಣೆ ವಹಿಸಲಾಗಿದೆ.
ರಾಜ್ಯದ ಜನರ ದಿಕ್ಕು ತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕಲಹದಲ್ಲಿ ತೊಡಗಿದೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.- ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ
ಬಿಜೆಪಿಯಲ್ಲಿ ಮಹತ್ವದ ರಾಜಕೀಯ ನಿರ್ಧಾರ ಕೈಗೊಳ್ಳುವ ಮುಂದಿನ ರಾಜಕೀಯ ನಡೆಯನ್ನು ರೂಪಿಸಲು ನಡೆಸುವ ಕಾರ್ಯಕಾರಿಣಿ ಸಭೆಗೆ ವಿಶೇಷ ಮಹತ್ವ ಇದೆ. ಕೇಂದ್ರದಿಂದ ನಿಯೋಜಿಸಲ್ಪಡುವ ನಾಯಕರ ಜತೆಗೆ ರಾಜ್ಯ ಘಟಕದ ಉಸ್ತುವಾರಿಯಾಗಿದ್ದವರು ತಪ್ಪದೇ ಪಾಲ್ಗೊಳ್ಳುತ್ತಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭಾಗಿಯಾಗದೇ ಇರುವುದು ಪಕ್ಷದಲ್ಲೇ ಹಲವು ರೀತಿಯ ಚರ್ಚೆ ಹುಟ್ಟು ಹಾಕಿದೆ. ಪಕ್ಷದ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿರುವ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಎಸ್.ಟಿ.ಸೋಮಶೇಖರ್ ಶಿವರಾಂ ಹೆಬ್ಬಾರ್ ಮಾಜಿ ಸಚಿವ ವಿ.ಸೋಮಣ್ಣ ಕಡ ಸಭೆಗೆ ಗೈರಾಗಿದ್ದರು.
‘ವಿಶ್ರಾಂತಿಯ ಪ್ರಶ್ನೆಯೇ ಇಲ್ಲ’
‘ನಾನು ಸೇರಿದಂತೆ ಪಕ್ಷದ ಯಾವುದೇ ಕಾರ್ಯಕರ್ತರು ಚುನಾವಣೆ ಮುಕ್ತಾಯ ಆಗುವವರೆಗೂ ವಿಶ್ರಾಂತಿ ಪಡೆಯುವ ಸಂದರ್ಭವೇ ಉದ್ಭವಿಸಬಾರದು’ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ‘ಎದುರಾಳಿ ಅಭ್ಯರ್ಥಿಯನ್ನು ಹಗುರವಾಗಿ ಪರಿಗಣಿಸದೇ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರ ಮುಂದೆ ಪ್ರಸ್ತುತ ಪಡಿಸಬೇಕು’ ಎಂದು ಸೂಚನೆ ನೀಡಿದರು. ‘ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆ ವಿಷಯದಲ್ಲಿ ರಾಜ್ಯದ ಜನರು ಸಂತೋಷದಲ್ಲಿದ್ದರು. ಆದರೆ ದುಷ್ಟ ಕಾಂಗ್ರೆಸ್ ಸರ್ಕಾರ ಹುಬ್ಬಳ್ಳಿಯ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿ ಸೇಡು ತೀರಿಸುವ ಕೆಲಸ ಮಾಡಿತ್ತು’ ಎಂದು ಕಿಡಿಕಾರಿದರು.
ಫೆ.25ರ ಒಳಗೆ ‘ನಾರಿ ಶಕ್ತಿ ವಂದನಾ’ ಕಾರ್ಯಕ್ರಮ
ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಜಿಲ್ಲಾ ಕಾರ್ಯಕಾರಿಣಿ ಹಾಗೂ ನಾರಿ ಶಕ್ತಿ ವಂದನಾ ಕಾರ್ಯಕ್ರಮ ಆಯೋಜನೆ ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾತನಾಡಿದ ಪ್ರೀತಂಗೌಡ ‘ಕಾಂಗ್ರೆಸ್ ಸರ್ಕಾರವು ರೈತ ವಿರೋಧಿ ದಲಿತ ವಿರೋಧಿ ನೀತಿ ಖಂಡಿಸಿ ನಿರ್ಣಯ ಅಂಗೀಕರಿಸಲಾಗಿದೆ. ದಲಿತ ಮತ್ತು ಶೋಷಿತ ವರ್ಗಕ್ಕೆ ಮೀಸಲಿಟ್ಟ ₹11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಗ್ಯಾರಂಟಿಗಾಗಿ ಉಪಯೋಗ ಮಾಡಿ ವಂಚಿಸಿದೆ. ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ’ ಎಂದರು. ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ ಫೆ.3ರಿಂದ 5ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾ ಕಾರ್ಯಕಾರಿಣಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಫಲಾನುಭವಿಗಳಾದ ಮಹಿಳೆಯರು ಸ್ವಸಹಾಯ ಸಂಘಗಳ ಸದಸ್ಯರ ಭೇಟಿ ಮಾಡುವುದು ಹಾಗೂ ಫಲಾನುಭವಿಗಳ ತಾಲ್ಲೂಕು ಜಿಲ್ಲಾಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ನಾನು ಸೇರಿದಂತೆ ಶಾಸಕಿ ಶಶಿಕಲಾ ಜೊಲ್ಲೆ ಗೀತಾ ವಿವೇಕಾನಂದ ಮಹಿಳಾ ಮೋರ್ಚಾದ ಅಧ್ಯಕ್ಷೆ ಮಂಜುಳಾ ಭಾರತಿ ಮುಗ್ದುಂ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಫೆ.25ರ ಒಳಗೆ ‘ನಾರಿ ಶಕ್ತಿ ವಂದನಾ ಕಾರ್ಯಕ್ರಮ’ ನಡೆಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಪ್ರತಿ ಬೂತ್‌ಮಟ್ಟದಲ್ಲಿ ಒಂದು ಅಥವಾ ಎರಡು ಕಡೆ ಗೋಡೆಬರಹ ಬರೆಯಲು ನಿಶ್ಚಯಿಸಲಾಗಿದೆ. ಇದನ್ನು ಆಂದೋಲನವಾಗಿ ನಡೆಸಲು ಸೂಚಿಸಲಾಗಿದೆ. ಈ ಆಂದೋಲನ ಯಶಸ್ಸು ಮಾಡಲು ತಂಡ ರಚಿಸಿದ್ದು ನಂದೀಶ್ ರೆಡ್ಡಿ ಸಂಚಾಲಕರಾಗಿ ನೇಮಕಗೊಂಡಿದ್ದಾರೆ. ಶೈಲೇಂದ್ರ ಬೆಲ್ದಾಳೆ ಮಹೇಂದ್ರ ಕವತಾಳ ಹರಿಕೃಷ್ಣ ಸಹ ಸಂಚಾಲಕರಾಗಿದ್ದಾರೆ ಎಂದು ಹೇಳಿದರು.
‘ಇಂಡಿಯಾ ಒಕ್ಕೂಟಕ್ಕೆ ನೀತಿ ನೇತೃತ್ವವೇ ಇಲ್ಲ’
‘ಇಂಡಿಯಾ ಒಕ್ಕೂಟದ ಮುಖಂಡರು ಒಂದು ಫೋಟೊಶೂಟ್ ಅಷ್ಟೇ ಮಾಡಿಕೊಂಡಿದ್ದರು. ಒಕ್ಕೂಟದ ಸಂಘಟನೆ ಅಷ್ಟಕ್ಕೇ ಸೀಮಿತವಾಗಿದೆ. ಆ ಒಕ್ಕೂಟದವರಿಗೆ ನೀತಿ ನಿಯತ್ತು ನೇತೃತ್ವ ಮೂರೂ ಇಲ್ಲ. ಆ ಒಕ್ಕೂಟ ನಿಧಾನವಾಗಿ ಮರೆಯಾಗಲಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ‘ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಹೊಗಳಿದ್ದು ಬಿಜೆಪಿಗೆ ಆಶೀರ್ವಾದ ಇದ್ದಂತೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.