ADVERTISEMENT

ಸುಳ್ಳು ಸುದ್ದಿಗಳ ವಿರುದ್ಧ ಎಲ್ಲರೂ ನಿಲ್ಲಬೇಕು: ಸಿಎಂ ಸಿದ್ದರಾಮಯ್ಯ

ಟಿಯೆಸ್ಸಾರ್, ಮೊಹರೆ, ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2024, 16:00 IST
Last Updated 2 ಅಕ್ಟೋಬರ್ 2024, 16:00 IST
ಶಿವಾಜಿ ಗಣೇಶನ್, ಶ್ರೀಕಾಂತಾಚಾರ್ ಆರ್. ಮಣೂರ, ಆರ್. ಪೂರ್ಣಿಮಾ, ಪದ್ಮರಾಜ ದಂಡಾವತಿ, ಸರಜೂ ಕಾಟ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದರು
ಶಿವಾಜಿ ಗಣೇಶನ್, ಶ್ರೀಕಾಂತಾಚಾರ್ ಆರ್. ಮಣೂರ, ಆರ್. ಪೂರ್ಣಿಮಾ, ಪದ್ಮರಾಜ ದಂಡಾವತಿ, ಸರಜೂ ಕಾಟ್ಕರ್ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದರು   

ಬೆಂಗಳೂರು: ‘ಗಾಂಧೀಜಿಯವರು ನೈತಿಕ ಪತ್ರಿಕೋದ್ಯಮವನ್ನು ಪ್ರತಿಪಾದಿಸುತ್ತಿದ್ದರು. ಆದರೆ ಇಂದು ಗಂಡ–ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸುತ್ತಾರೆ. ಇದು ನೈತಿಕ ಪತ್ರಿಕೋದ್ಯಮವಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ‌ ಇಲಾಖೆ ವಾರ್ತಾ ಸೌಧದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಟಿಯೆಸ್ಸಾರ್ ಮತ್ತು ಮೊಹರೆ  ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಅವರು ಮಾತನಾಡಿದರು.

‘ಇವತ್ತು ಸುಳ್ಳು ಸುದ್ದಿ ಹಾಗೂ ಊಹಾ ಪತ್ರಿಕೋದ್ಯಮದ ಪಿಡುಗು ಹೆಚ್ಚಾಗಿದೆ. ಇದು ಸಮಾಜಕ್ಕೆ ಬೇಕಾ’ ಎಂದು ಪ್ರಶ್ನಿಸಿದ ಅವರು, ‘ಸುಳ್ಳು ಸುದ್ದಿಗಳಿಂದ ಸಮಾಜ ಸುಧಾರಣೆಯಾಗುವುದಿಲ್ಲ. ನಾವೆಲ್ಲರೂ ಸುಳ್ಳು ಸುದ್ದಿಯ ವಿರುದ್ಧ ನಿಲ್ಲಬೇಕು‌’ ಕರೆ ನೀಡಿದರು.

ADVERTISEMENT

‘ಹಿಂದೆಲ್ಲಾ ಪತ್ರಕರ್ತರಿಗೆ ತುಂಬಾ ಘನತೆ, ಗೌರವ ಇತ್ತು. ಈಗ ಇದೆಯಾ ಗೊತ್ತಿಲ್ಲ. ಈ ಬಗ್ಗೆ ವಿಶ್ಲೇಷಣೆ ಮಾಡಿದರೆ ಅದನ್ನೇ ದೊಡ್ಡ ವಿವಾದ ಮಾಡಿಬಿಡುತ್ತಾರೆ. ಹೀಗಾಗಿ ಈ ಊಹಾ ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ. ಈಗಿನ ಪತ್ರಕರ್ತರಿಗೆ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕೃತರು ಮಾದರಿ ಆಗಬೇಕು’ ಎಂದರು.

ಟಿಯೆಸ್ಸಾರ್‌ ಮತ್ತು ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರ ಪರವಾಗಿ ಸರಜೂ ಕಾಟ್ಕರ್‌ ಮಾತನಾಡಿದರು.

ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನುಂ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ವಾರ್ತಾ ಇಲಾಖೆ ಕಾರ್ಯದರ್ಶಿ ಕೆ.ವಿ. ತ್ರಿಲೋಕಚಂದ್ರ, ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ಕಂಠೀರವ ಸ್ಟುಡಿಯೊ ಅಧ್ಯಕ್ಷ ಅಯೂಬ್ ಉಪಸ್ಥಿತರಿದ್ದರು.

ಶಿವಲಿಂಗಪ್ಪ ಎನ್. ಮಂಜುನಾಥ ಇಂದೂಧರ ಹೊನ್ನಾಪುರ ಚಂದ್ರಶೇಖರ್ ಪಾಲೆತ್ತಾಡಿ ಮತ್ತು ರಾಜೀವ ಕಿದಿಯೂರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಮಾಡಿದರು

ಗಾಂಧಿ ಸೇವಾ ಪ್ರಶಸ್ತಿ ಪ್ರದಾನ

ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಹಾಗೂ ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಗೊಟ್ಟಿಗೆರೆಯ ಜಿ.ಬಿ. ಶಿವರಾಜು ಅವರಿಗೆ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

‘ಟಿಯೆಸ್ಸಾರ್‌ ಪತ್ರಿಕೋದ್ಯಮ ಪ್ರಶಸ್ತಿ’

l ಶಿವಾಜಿ ಗಣೇಶನ್ (2019),

l ಶ್ರೀಕಾಂತಾಚಾರ್ ಆರ್.ಮಣೂರ (2020)

l ಆರ್. ಪೂರ್ಣಿಮಾ (2021),

l ಪದ್ಮರಾಜ ದಂಡಾವತಿ (2022)

l ಸರಜೂ ಕಾಟ್ಕರ್ (2023)

ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ

l ರಾಜೀವ ಕಿದಿಯೂರ (2019),

l ಇಂದೂಧರ ಹೊನ್ನಾಪುರ(2020),

l ಎನ್. ಮಂಜುನಾಥ (2021),

l ಚಂದ್ರಶೇಖರ್ ಪಾಲೆತ್ತಾಡಿ (2022)

l ಶಿವಲಿಂಗಪ್ಪ ದೊಡ್ಡಮನಿ (2023)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.