ADVERTISEMENT

ಹೊಸ ವರ್ಷಾಚರಣೆ | ಕೋವಿಡ್ ತಡೆಗೆ ಮುಂಜಾಗ್ರತೆ ವಹಿಸಿ: ಆರೋಗ್ಯ ಸಚಿವ ಸೂಚನೆ

ಬಿಬಿಎಂಪಿ, ನಗರ ಪೊಲೀಸ್ ಕಮಿಷನರ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 14:50 IST
Last Updated 28 ಡಿಸೆಂಬರ್ 2023, 14:50 IST
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್   

ಬೆಂಗಳೂರು: ‘ಹೊಸ ವರ್ಷದ ಆಚರಣೆ ವೇಳೆ ಹೆಚ್ಚು ಜನರು ಒಂದೆಡೆ ಸೇರುವುದರಿಂದ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಬಿಬಿಎಂಪಿ ಮುಖ್ಯ ಆಯುಕ್ತ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್‌ಗೆ ಸೂಚಿಸಿದ್ದಾರೆ. 

ಈ ಬಗ್ಗೆ ಅವರು ಪತ್ರ ಬರೆದಿದ್ದಾರೆ. ‘ಕೊರೊನಾ ವೈರಾಣುವಿನ ರೂಪಾಂತರಿ ಓಮಿಕ್ರಾನ್‌ನ ಉಪತಳಿ ಜೆಎನ್‌.1 ಪ್ರಕರಣ ನಗರದಲ್ಲಿ ವರದಿಯಾಗಿರುವುದರಿಂದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು. ಈಗಾಗಲೇ ಮಾರ್ಗಸೂಚಿಗಳು, ಸುತ್ತೋಲೆಗಳು ಹಾಗೂ ಸಲಹಾ ಪತ್ರಗಳನ್ನು ಹೊರಡಿಸಲಾಗಿದೆ. ಅವುಗಳ ಪಾಲನೆಯ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಲಭ್ಯವಿರುವ ಮಾಹಿತಿಯ ಪ್ರಕಾರ ಜೆಎನ್‌.1 ಉಪತಳಿಯು ಹೆಚ್ಚು ಹರಡುವಿಕೆಯ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ವೃದ್ಧರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಗಳು ಹೆಚ್ಚಿವೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

‘ರಾಜ್ಯದಲ್ಲಿ ಈವರೆಗೆ ವರದಿಯಾದ 34 ಜೆಎನ್‌.1 ಪ್ರಕರಣಗಳಲ್ಲಿ 21 ಪ್ರಕರಣಗಳು ನಗರದಲ್ಲಿಯೇ ದೃಢಪಟ್ಟಿವೆ. ಆದ್ದರಿಂದ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೊರಾಂಗಣ ಹಾಗೂ ಒಳಾಂಗಣ ಪ್ರದೇಶದಲ್ಲಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು. ಮುಖಗವಸು ಧರಿಸುವಿಕೆ, ಪರಸ್ಪರ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೋಂಕು ನಿವಾರಕ ದ್ರಾವಣ ಬಳಕೆಯ ಬಗ್ಗೆ ಅರಿವು ಮೂಡಿಸಬೇಕು’ ಎಂದು ಹೇಳಿದ್ದಾರೆ. 

ADVERTISEMENT

‘60 ವರ್ಷ ಮೇಲ್ಪಟ್ಟವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಇತರೆ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರವವರು ಮುಖಗವಸು ಧರಿಸಬೇಕು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.