ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ಸೋಮವಾರ ಬೆಳಿಗ್ಗೆ ದಾಳಿ ಮಾಡಿದ್ದು, ಕೈದಿಗಳು ಅಕ್ರಮವಾಗಿ ಬಚ್ಚಿಟ್ಟಿದ್ದ ಹಲವು ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು ಹಾಗೂ ರೌಡಿಗಳ ಮೇಲೆ ಸಿಸಿಬಿ ಪೊಲೀಸರು ನಿಗಾ ವಹಿಸಿದ್ದಾರೆ. ಕೆಲ ಕೈದಿಗಳು ಜೈಲಿನಿಂದಲೇ ಮತದಾರರಿಗೆ ಕರೆ ಮಾಡಿ ಬೆದರಿಸುವ ಹಾಗೂ ತಮ್ಮ ಪರ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ತಾಕೀತು ಮಾಡುವ ಸಾಧ್ಯತೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ಪೊಲೀಸರು, ಜಂಟಿ ಕಮಿಷನರ್ ಎಸ್.ಡಿ. ಶರಣಪ್ಪ ನೇತೃತ್ವದಲ್ಲಿ ದಾಳಿ ಮಾಡಿದರು.
‘ವಿಶೇಷ ತಂಡಗಳನ್ನು ರಚಿಸಿ ಕಾರಾಗೃಹದ ಮೇಲೆ ದಾಳಿ ಮಾಡಲಾಯಿತು. ಜೈಲಿನೊಳಗಿನ ಎಲ್ಲ ಬ್ಯಾರಕ್‌ಗಳ ಕೊಠಡಿಗಳು, ಮೈದಾನ ಹಾಗೂ ಇತರೆ ಜಾಗಗಳಲ್ಲಿ ಶೋಧ ನಡೆಸಲಾಯಿತು. ಕೈದಿಗಳು ಇರುವ ಕೊಠಡಿಗಳಲ್ಲೂ ಪರಿಶೀಲನೆ ನಡೆಸಲಾಯಿತು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.
‘ಎರಡು ಮೊಬೈಲ್‌ಗಳು, ಸಿಮ್‌ಕಾರ್ಡ್, ಚಾರ್ಜರ್, 5 ಚಾಕು, 5 ಕತ್ತರಿ ಹಾಗೂ ಊಟದ ಪ್ಲೇಟ್‌ನಿಂದ ತಯಾರಿಸಿದ್ದ ಒಂದು ಚಾಕು ಜಪ್ತಿ ಮಾಡಲಾಗಿದೆ. ಮೊಬೈಲ್ ಇರಿಸಿಕೊಂಡಿದ್ದ ಕೈದಿಗಳ ವಿರುದ್ಧ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.
‘ಊಟದ ಪ್ಲೇಟ್ ಜಜ್ಜಿ ಮಡಚಿ ತಯಾರಿಸಿದ್ದ ಚಾಕುವನ್ನು ಎಲ್ಲ ಕೈದಿಗಳು ಓಡಾಡುವ ಜಾಗದಲ್ಲಿ ಇರಿಸಲಾಗಿತ್ತು. ಚಾಕು ಯಾರಿಗೆ ಸೇರಿದ್ದು? ಅದನ್ನು ಯಾವುದಾದರೂ ಅಪರಾಧ ಕೃತ್ಯಕ್ಕೆ ಬಳಸಲಾಗಿತ್ತಾ? ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದರು.
ಭದ್ರತೆ ವೈಫಲ್ಯ: ‘ಕಾರಾಗೃಹ ಪ್ರವೇಶ ದ್ವಾರ ಹಾಗೂ ಇತರೆಡೆ ಬಿಗಿ ಭದ್ರತೆ ಇರುವುದಾಗಿ ಇಲಾಖೆಯವರು ಹೇಳುತ್ತಾರೆ. ಆದರೆ, ಮೊಬೈಲ್ ಹಾಗೂ ಚಾಕುಗಳು ಒಳಗೆ ಹೋಗಿದ್ದು ಹೇಗೆ? ಎಂಬ ಪ್ರಶ್ನೆ ಮೂಡಿದೆ. ಕಾರಾಗೃಹದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.