ಬೆಂಗಳೂರು: ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳ ಮತದಾರರನ್ನು ಮತಗಟ್ಟೆಗೆ ಕರೆತರುವ ಪ್ರಯತ್ನ ಮತ್ತೆ ವಿಫಲವಾಗಿದೆ. ಒಂದು ತಿಂಗಳಿಂದ ಸತತವಾಗಿ ಮತದಾನದ ಜಾಗೃತಿ ಮೂಡಿಸಿದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಮಾಡದೆ ನಗರದ ಮತದಾರರು ವಿಫಲರಾಗಿದ್ದಾರೆ. ಕಳೆದ ಬಾರಿಗಿಂತ ಕಡಿಮೆ ಮತದಾನವಾಗಿದ್ದು ಭಾರಿ ನಿರಾಸೆ ಉಂಟುಮಾಡಿದ್ದಾರೆ.
ನಗರದಲ್ಲಿ ಕಳೆದ ಬಾರಿಗಿಂತ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬುಧವಾರ ಸಂಜೆ 6ರಂತೆ ಬಿಡುಗಡೆಯಾಗಿರುವ ಪ್ರಕಟಣೆಯಂತೆ ಶೇ 54.53ರಷ್ಟು ಮತದಾನವಾಗಿದ್ದು, ಕಳೆದ ಬಾರಿಗಿಂತ ಶೇ 0.59ರಷ್ಟು ಕಡಿಮೆಯಾಗಿದೆ. ಅಂತಿಮವಾಗಿ ಎಲ್ಲ ಲೆಕ್ಕಾಚಾರ ಮುಗಿದರೂ, ಶೇಕಡ ಒಂದೆರಡು ಪ್ರಮಾಣ ಹೆಚ್ಚಾಗಬಹುದಾಗಿದೆ. ಹೀಗಾಗಿ, ಮತದಾರರನ್ನು ಒಲಿಸಿ ಹೆಚ್ಚಿನ ಪ್ರಮಾದಲ್ಲಿ ಮತಗಟ್ಟೆಗೆ ಕರೆತರುವ ಕಸರತ್ತು ವಿಫಲವಾಗಿದೆ.
2018ರಲ್ಲಿ ಶೇ 55.12ರಷ್ಟು ಮತದಾನವಾಗಿತ್ತು. 90.36 ಲಕ್ಷ ಮತದಾರರಲ್ಲಿ 49.80 ಲಕ್ಷ ಮಂದಿ ಮತ ಚಲಾಯಿಸಿದ್ದರು. 2019ರ ಲೋಕಸಭೆ ಚುನಾವಣೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಹೀಗಾಗಿ, ಮತದಾನ ಪ್ರಮಾಣವನ್ನು ಕನಿಷ್ಠ ಶೇ 75ಕ್ಕೆ ಹೆಚ್ಚಿಸಬೇಕೆಂದು ಚುನಾವಣೆ ಆಯೋಗ ಹಾಗೂ ಬಿಬಿಎಂಪಿ ಸಾಕಷ್ಟು ಪ್ರಯತ್ನಪಟ್ಟಿತು. ಹಿಂದೆಂದಿಗಿಂತಲೂ ಹೆಚ್ಚಿನ ‘ಸ್ವೀಪ್’ ಕಾರ್ಯಕ್ರಮಗಳನ್ನು ಆಯೋಜಿಸಿ ಮತದಾನದ ಅರಿವು ಮೂಡಿಸಲು ಕಸರತ್ತು ನಡೆಸಿತ್ತು. ಆದರೆ, ಇದಕ್ಕೆಲ್ಲ ಮತದಾರ ಮಣೆ ಹಾಕಿಲ್ಲ.
ಐಟಿ– ಬಿಟಿ ವಲಯದಲ್ಲಿ ಜಾಗೃತಿ: ನಗರಕ್ಕೆ ಉದ್ಯೋಗ ಅರಸಿ ಬಂದಿರುವವರಲ್ಲಿ ಐಟಿ–ಬಿಟಿ ಉದ್ಯೋಗಿಗಳು ಹೆಚ್ಚು. ಅವರ ಜನಸಂಖ್ಯೆಯೂ ಇಲ್ಲಿ ಹೆಚ್ಚು. ಹೀಗಾಗಿ ಅವರಿರುವ ಭಾಗಗಳಲ್ಲಿ, ಕಂಪನಿಗಳಲ್ಲಿ ಹೆಚ್ಚಿನ ಅರಿವು ಮೂಡಿಸಿ ಮತದಾನ ಮಾಡಬೇಕೆಂದು ಕೋರಲಾಗಿತ್ತು. ಮತದಾನದ ದಿನ ರಜೆಯನ್ನೂ ಘೋಷಿಸಲಾಗಿತ್ತು. ಪ್ರವಾಸ, ಪಿಕ್‌ನಿಕ್ ಎಲ್ಲವನ್ನೂ ಕೈಬಿಟ್ಟು ಮತದಾನ ಮಾಡಿ ಎಂದು ಮನವಿ ಮಾಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ.
ಕಾರ್ಖಾನೆ– ಗಾರ್ಮೆಂಟ್ಸ್‌ಗಳಲ್ಲಿ ಅರಿವು: ಕಾಸಿಯಾ, ಎಫ್‌ಕೆಸಿಸಿಐ, ಕೈಗಾರಿಕೆ ಪ್ರದೇಶಗಳ ಸಂಘಗಳು, ಮಾಲೀಕರೊಂದಿಗೆ ಕಾರ್ಯಕ್ರಮ ನಡೆಸಿ, ಮತದಾನದ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಅರಿವು ಮೂಡಿಸಿದ್ದರು. ಎಲ್ಲ ಕಾರ್ಮಿಕರಿಗೂ ಮತದಾನ ಮಾಡಲು ಅನುಕೂಲ ಕಲ್ಪಿಸಬೇಕೆಂದು ಮನವಿ ಮಾಡಿದರು. ಅದರಂತೆ, ಮತದಾನದ ದಿನ ಮಾಲೀಕರು ರಜೆಯನ್ನೂ ನೀಡಿದ್ದರು. ಇಷ್ಟಾದರೂ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಗುರಿ ತಲುಪಲು ಸಾಧ್ಯವಾಗಲಿಲ್ಲ.
ಥೀಮ್ ಮತಗಟ್ಟೆಗಳ ಆಕರ್ಷಣೆ: ಮತಗಟ್ಟೆಗೆ ಮತದಾರರನ್ನು ಆಕರ್ಷಿಸಲು ಪಿಂಕ್, ಹಸಿರು, ಅಂಗವಿಕಲರ ಸ್ನೇಹಿ ಸೇರಿದಂತೆ ಹಲವು ಥೀಮ್ ಆಧರಿತ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಎಲ್ಲ ಸೌಲಭ್ಯಗಳೂ ಮತದಾರರನ್ನು ಸೆಳೆಯುವಲ್ಲಿ ನಿರೀಕ್ಷಿತ ಮಟ್ಟದಲ್ಲಿ ವಿಫಲವಾದವು. ಇದಲ್ಲದೆ, ಹಲವು ಸಂಘ–ಸಂಸ್ಥೆಗಳು ಮತದಾನ ಮಾಡಿ ಎಂದು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಮತದಾರರಿಗೆ ಮತಗಟ್ಟೆಗೆ ತೆರಳಲು ಕರೆ ನೀಡಿದ್ದವು. ಆದರೂ ಮತದಾರರು ಮತದಾನದ ದಿನ ಮತಗಟ್ಟೆಗಳತ್ತ ಸಂಪೂರ್ಣವಾಗಿ ತೆರಳಲಿಲ್ಲ.
‘ಕುಸಿಯದಿರುವುದು ಸಮಾಧಾನಕರ’
ಮತದಾನದ ಪ್ರಮಾಣದಲ್ಲಿ ಯಾವುದೇ ರೀತಿಯ ವೃದ್ಧಿ ಸ್ವಾಗತಾರ್ಹ. ಕಳೆದ ಮೂರು ಚುನಾವಣೆಗಳಲ್ಲಿ ಮತದಾನದ ಪ್ರಮಾಣದಲ್ಲಿ ಕುಸಿತ ಕಂಡುಬಂದಿತ್ತು. ಈ ಬಾರಿ ಕಳೆದ ಬಾರಿಯಷ್ಟು ಅಥವಾ ಮತದಾರರ ಸಂಖ್ಯೆಯಲ್ಲಿ ವೃದ್ಧಿಯಾಗಿರುವುದು ಒಳ್ಳೆಯ ಬೆಳವಣಿಗೆ ಎಂದು ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಹೇಳಿದರು.
2 ಕಡೆ ಮತಪಟ್ಟಿಯಲ್ಲಿ ಹೆಸರು!
‘ನಗರದಲ್ಲಿ ಮತದಾನ ಕಡಿಮೆಯಾಗಲು ಸ್ವಂತ ಊರು ಹಾಗೂ ಉದ್ಯೋಗ ಮಾಡುವ ಸ್ಥಳ ಬೆಂಗಳೂರಿನಲ್ಲೂ ಮತದಾರರ ಗುರುತಿನ ಚೀಟಿ ಹೊಂದಿರುವುದು ಪ್ರಮುಖ ಕಾರಣ. ಉದ್ಯೋಗ ಹಾಗೂ ವಾಸ ಸ್ಥಳದ ದಾಖಲೆಗಾಗಿ ಎಪಿಕ್ ಮಾಡಿಸಿಕೊಳ್ಳುತ್ತಾರೆ. ಆದರೆ ಇವರಲ್ಲಿ ಬಹುತೇಕರು ಸ್ವಂತ ಊರಿಗೆ ಹೋಗಿ ಮತ ಚಲಾಯಿಸುತ್ತಾರೆ ಅಥವಾ ಮತದಾನವನ್ನೇ ಮಾಡುವುದಿಲ್ಲ. ಸುಮಾರು ಶೇ 20ರಷ್ಟು ಮಂದಿ ಇಂತಹವರಿದ್ದಾರೆ. ಹೀಗಾಗಿಯೇ ನಗರದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗುವುದಿಲ್ಲ’ ಎಂದು ಹಲವು ಅಭ್ಯರ್ಥಿಗಳೇ ಅಭಿಪ್ರಾಯಪಟ್ಟರು.
ಇನ್ನು, ಮತದಾನದ ಬಗ್ಗೆ ಸಾಕಷ್ಟು ಮಂದಿಗೆ ಆಸಕ್ತಿಯೇ ಇಲ್ಲ. ‘ಯಾರು ಬಂದರೆ ನಮಗೇನು? ಮತ ಹಾಕಿದರೆಷ್ಟು ಬಿಟ್ಟರೆಷ್ಟು?’ ಎಂದು ಉದಾಸೀನ ಮನೋಭಾವದಿಂದ ಮತದಾನದ ಪ್ರಮಾಣ
ಕಡಿಮೆಯಾಗುತ್ತಿದೆ ಎಂದು ಸಂಘ–ಸಂಸ್ಥೆಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.