ಬೆಂಗಳೂರು: ವಿಧಾನಸೌಧ ಚುನಾವಣೆ ನೀತಿ ಸಂಹಿತೆ ಜಾರಿಯಾಗಿ ಮತದಾನ ಮುಗಿಯುವವರೆಗೂ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಹಲವು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅವೆಲ್ಲ ದೃಶ್ಯಗಳು ಸಂಚಾರ ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಪ್ರಚಾರ ಮೆರವಣಿಗೆ, ಬೈಕ್ ರ‍್ಯಾಲಿ, ರೋಡ್ ಶೋ ಹಾಗೂ ಇತರೆ ಕಾರ್ಯಕ್ರಮಕ್ಕೆಂದು ರಸ್ತೆಗೆ ಇಳಿದಿದ್ದ ಬಹುತೇಕ ಕಾರ್ಯಕರ್ತರು, ಸಂಚಾರ ನಿಯಮ ಉಲ್ಲಂಘಿಸಿದ್ದಾರೆ. ಇದರ ಜೊತೆ, ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಿಯಮ ಮೀರಿದ್ದಾರೆ.
ಏಪ್ರಿಲ್ 15ರಿಂದ ಮೇ 10ರವರೆಗೆ 4.12 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಸುಮಾರು ₹ 22.89 ಕೋಟಿ ದಂಡ ವಿಧಿಸಲಾಗಿದೆ.
ನೋಂದಣಿ ಸಂಖ್ಯೆ ಆಧರಿಸಿ ಹಲವು ವಾಹನಗಳ ಮೇಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲ ವಾಹನಗಳ ಮಾಲೀಕರ ಮೊಬೈಲ್‌ಗಳಿಗೆ ಈಗಾಗಲೇ ದಂಡದ ಸಂದೇಶ ರವಾನಿಸಿದ್ದಾರೆ.
‘ಅತೀ ವೇಗದ ಚಾಲನೆ, ಸಿಗ್ನಲ್ ಜಂಪ್, ಜಿಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ತ್ರಿಬಲ್ ರೈಡಿಂಗ್ ಹಾಗೂ ಚಾಲನೆ ವೇಳೆ ಮೊಬೈಲ್ ಬಳಕೆ ಉಲ್ಲಂಘನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಮಾಲೀಕರಿಗೆ ಸಂಪರ್ಕ ರಹಿತವಾಗಿ ದಂಡ ವಿಧಿಸಲು ನಗರದ ಹಲವರು ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎ.ಐ) ಸಂಚಾರ ನಿರ್ವಹಣಾ ವ್ಯವಸ್ಥೆಯಡಿ (ಐಟಿಎಂಎಸ್) 250 ಕ್ಯಾಮೆರಾ ಅಳವಡಿಸಲಾಗಿದೆ. ಕೇಂದ್ರ ಸರ್ಕಾರದ ನಿರ್ಭಯಾ ನಿಧಿ ಯೋಜನೆಯಡಿ ಅಳವಡಿಸಿರುವ ‘ನೇತ್ರ’ ಕ್ಯಾಮೆರಾಗಳನ್ನೂ ಸಂಚಾರ ನಿಯಮ ಪ್ರಕರಣ ಪತ್ತೆಗಾಗಿ ಬಳಸಲಾಗುತ್ತಿದೆ.
ದಿನದ 24 ಗಂಟೆಯೂ ಸಕ್ರಿಯವಾಗಿರುವ ಕ್ಯಾಮೆರಾಗಳು, ನಿಯಮ ಉಲ್ಲಂಘಿಸುವವರ ಫೋಟೊ ಕ್ಲಿಕ್ಕಿಸಿ ಸರ್ವರ್‌ನಲ್ಲಿ ಸಂಗ್ರಹಿಸುತ್ತಿವೆ. ವಾಹನ ನೋಂದಣಿ ಸಂಖ್ಯೆ ಆಧರಿಸಿ ಐಟಿಎಂಎಸ್ ವ್ಯವಸ್ಥೆ ಮೂಲಕ ಮಾಲೀಕರಿಗೆ ದಂಡದ ಸಂದೇಶ ಹೋಗುತ್ತಿದೆ.
ನಿಯಮ ಉಲ್ಲಂಘನೆ ಗೊತ್ತಿದ್ದರೂ ಓಡಾಟ: ‘ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಕಾರ್ಯಕರ್ತರು, ಕಾನೂನಿನ ಭಯವಿಲ್ಲದೇ ರಸ್ತೆಯಲ್ಲಿ ಸಂಚರಿಸಿದ್ದರು. ಕೆಲವರು, ಪಕ್ಷಗಳ ಧ್ವಜವನ್ನು ದ್ವಿಚಕ್ರ ವಾಹನಗಳ ಮೇಲೆ ಕಟ್ಟಿಕೊಂಡು ಹೆಲ್ಮೆಟ್ ಧರಿಸದೇ ಓಡಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಬಹುತೇಕ ಪೊಲೀಸರು, ಚುನಾವಣೆ ಕರ್ತವ್ಯದಲ್ಲಿದ್ದರು. ವೃತ್ತ ಹಾಗೂ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಿಬ್ಬಂದಿ ಕೊರತೆ ಇತ್ತು. ತಮಗೆ ದಂಡ ವಿಧಿಸುವುದಿಲ್ಲ ಮತ್ತು ಯಾರೂ ನೋಡುವುದಿಲ್ಲ ಎನ್ನುವ ಭಾವನೆಯಿಂದ ಬಹುತೇಕರು ನಿಯಮ ಉಲ್ಲಂಘಿಸಿದ್ದಾರೆ. ಸಿಬ್ಬಂದಿ ಇಲ್ಲದಿದ್ದರೂ ನಮ್ಮ ಕ್ಯಾಮೆರಾಗಳು ಕೆಲಸ ಮಾಡುತ್ತಿದ್ದವು. ಹೀಗಾಗಿಯೇ 25 ದಿನಗಳಲ್ಲಿ 4.12 ಲಕ್ಷ ಪ್ರಕರಣಗಳು ದಾಖಲಾಗಿವೆ’ ಎಂದರು.
‘ಚಿಕ್ಕಪೇಟೆ ಅಭ್ಯರ್ಥಿ: ₹11500 ದಂಡ’
‘ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ರ‍್ಯಾಲಿ ನಡೆಸಿದ್ದ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ಅವರು ‘ಕೆಎ 05 ಕೆಟಿ 2253’ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ್ದರು. ಸವಾರ ಹಾಗೂ ಹಿಂಬದಿ ಸವಾರರಾದ ಅಭ್ಯರ್ಥಿ ಯಾವುದೇ ಹೆಲ್ಮೆಟ್ ಧರಿಸಿರಲಿಲ್ಲ. ಇದೇ ದ್ವಿಚಕ್ರ ವಾಹನದ ಮೇಲೆ ₹ 11500 ದಂಡ ಬಾಕಿ ಇದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.