ADVERTISEMENT

ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ: ಅವ್ಯವಸ್ಥೆಯ ಆಗರವಾದ ದಾಖಲಾತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 20:41 IST
Last Updated 22 ಡಿಸೆಂಬರ್ 2021, 20:41 IST
ನಗರದ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂದೆ ಬುಧವಾರ ಗುಂಪು ಸೇರಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು –ಪ್ರಜಾವಾಣಿ ಚಿತ್ರ
ನಗರದ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಮುಂದೆ ಬುಧವಾರ ಗುಂಪು ಸೇರಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಇಲ್ಲಿನ ಮಲ್ಲೇಶ್ವರದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿ ಆವರಣ ಬುಧವಾರ ಅವ್ಯವಸ್ಥೆಯ ಆಗರವಾಗಿತ್ತು. ಬಿ.ಎಸ್ಸಿ ನರ್ಸಿಂಗ್‌, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್‌ ಸೈನ್ಸ್ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ದಾಖಲಾತಿ ಪರಿಶೀಲನೆ ಸಲುವಾಗಿ ರಾಜ್ಯದ ವಿವಿಧ ಪ್ರದೇಶಗಳಿಂದ ಬಂದಿದ್ದ ಪೋಷಕರು ಮತ್ತು ವಿದ್ಯಾರ್ಥಿಗಳು ಸಮಸ್ಯೆ ಎದುರಿಸಿದರು.

ಪ್ರಾಧಿಕಾರವು ಪೋಷಕರಿಗೆ ಸಮರ್ಪಕವಾಗಿ ಮಾಹಿತಿ ನೀಡದಿರುವುದೇ ಈ ಎಲ್ಲ ಅವ್ಯವಸ್ಥೆಗೆ ಕಾರಣ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.

‘ಎಸ್ಸೆಸ್ಸೆಲ್ಸಿ, ಪಿಯುಸಿ ಅಂಕಪಟ್ಟಿ ಸೇರಿದಂತೆ ವಿವಿಧ ದಾಖಲೆಗಳ ಪರಿಶೀಲನೆಗೆ ಬರುವಂತೆ ಸೂಚಿಸಲಾಗಿತ್ತು. ಆದರೆ, ಇದು ಅವ್ಯವಸ್ಥೆಯ ತಾಣವಾಗಿದೆ. ಕೋವಿಡ್‌ ಸಮಯದಲ್ಲಿ ನೂರಾರು ಜನರನ್ನು ಇಲ್ಲಿ ಒಂದೇ ದಿನ ಸೇರಿಸಿ ಜಾತ್ರೆ ಮಾಡಲಾಗಿದೆ. ಬೆಳಿಗ್ಗೆಯಿಂದಲೇ ಜನದಟ್ಟಣೆಯಾಗಿದೆ. ಸಂಜೆಯವರೆಗೆ ಕಾದರೂ ಪರಿಶೀಲನೆ ನಡೆಸಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿಭಾಗವಾರು ಅಥವಾ ಜಿಲ್ಲಾವಾರು ದಾಖಲೆಗಳನ್ನು ಪರಿಶೀಲಿಸಬಹುದಿತ್ತು. ಕುಡಿಯುವ ನೀರಿಗೂ ಪರದಾಡಬೇಕಾಗಿದೆ’ ಎಂದು ತಮ್ಮ ಮಗಳ ಜತೆ ಬಂದಿದ್ದ ಚಿಕ್ಕಬಳ್ಳಾಪುರ ಜಿಲ್ಲಾ ರೇಷ್ಮೆ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಯಲುವಳ್ಳಿ ಸೊಣ್ಣೆಗೌಡ ದೂರಿದರು.

ADVERTISEMENT

‘ಅರ್ಜಿ ಸಂಖ್ಯೆ 5,12,000ವರೆಗೆ ಇರುವವರ ದಾಖಲಾತಿಗಳನ್ನು ಪರಿಶೀಲಿಸುವುದಾಗಿ ಅಧಿಕಾರಿಗಳು ಹೇಳಿದರು. ಆದರೆ, ದೂರದ ಊರುಗಳಿಂದ ಬಂದವರಿಗೆ ಇದರಿಂದ ತೊಂದರೆಯಾಗಿದೆ’ ಎಂದು ಹೇಳಿದರು.

‘ನನ್ನ ಮಗಳನ್ನು ಕರೆದುಕೊಂಡು ಬೆಳಿಗ್ಗೆ ಬಂದಿದ್ದೆ. ಒಳಗೆ ಕೂರಿಸಿದವರನ್ನು ಸಂಜೆಯಾದರೂ ಹೊರಗೆ ಬಿಡಲಿಲ್ಲ. ದಾಖಲಾತಿ ಪರಿಶೀಲನೆ ಇಂದಿಗೆ ಮುಕ್ತಾಯವಾಯಿತು ಎಂದು ಹೇಳಿದ್ದಾರೆ. ಉಪವಾಸವಿದ್ದರೂ ಪ್ರಯೋಜನವಾಗಲಿಲ್ಲ’ ಎಂದು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ಪರಶುರಾಂಪುರದಿಂದ ಬಂದಿದ್ದ ಪೋಷಕರೊಬ್ಬರು ದೂರಿದರು.

‘ಸರಿಯಾಗಿ ಮಾಹಿತಿ ನೀಡಿದ್ದರೆ ಬೆಂಗಳೂರಿಗೆ ಬರುವ ಅನಿವಾರ್ಯ ಇರುತ್ತಿರಲಿಲ್ಲ’ ಎಂದು ವಿದ್ಯಾರ್ಥಿಗಳು ಕೆಇಎ ವಿರುದ್ಧ ಕಿಡಿಕಾರಿದರು.

‘ಬೆಂಗಳೂರಿಗೆ ಬಂದು ವಸತಿ ಗೃಹದಲ್ಲಿದ್ದರೆ ಅಪಾರ ವೆಚ್ಚವಾಗುತ್ತದೆ. ಮಧ್ಯಮ ಮತ್ತು ಬಡ ವರ್ಗದವರಿಗೆ ಇದು ಕಷ್ಟ. ಇಂದಿನ ತಂತ್ರಜ್ಞಾನ ಯುಗದಲ್ಲಿ ಬೀದರ್‌, ಕಲಬುರ್ಗಿಯಿಂದ ಕೇವಲ ದಾಖಲಾತಿ ಪರಿಶೀಲನೆ ಇಲ್ಲಿಗೆ ಬರಬೇಕಾ? ಜಿಲ್ಲಾಮಟ್ಟದ ಅಧಿಕಾರಿಗಳಿಂದಲೇ ಪರಿಶೀಲನೆ ನಡೆಸಿದ್ದರೆ ಈ ಅವ್ಯವಸ್ಥೆಯಾಗುತ್ತಿರಲಿಲ್ಲ’ ಎಂದು ತುಮಕೂರಿನ ಮಾರಪ್ಪ ಹೇಳಿದರು.

‘ಜಿಲ್ಲಾ ಕೇಂದ್ರಗಳಲ್ಲೂ ಪರಿಶೀಲನೆ’
ಬಿ.ಎಸ್ಸಿ ನರ್ಸಿಂಗ್‌, ಬಿಪಿಟಿ, ಬಿಪಿಒ, ಬಿಎಸ್‌ಸಿ ಅಲೈಡ್‌ ಸೈನ್ಸ್ ಮತ್ತು ಬಿಪಿಒ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಅರ್ಜಿ ಸಂಖ್ಯೆ 5,12,001ರಿಂದ 5,20,000ರವರೆಗೆ ದಾಖಲಾತಿಗಳ ಪರಿಶೀಲನೆಯನ್ನು ಡಿ.27ರಿಂದ 29ರವರೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ತಿಳಿಸಿದ್ದಾರೆ.

ದಾಖಲಾತಿ ಪರಿಶೀಲನೆಗೆ ಬೆಂಗಳೂರಿನಲ್ಲೇ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಆಯಾ ಜಿಲ್ಲೆಗಳಲ್ಲಿ ನಿಗದಿಪಡಿಸುವ ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆಗೆ ಎಲ್ಲ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು ಎಂದು ತಿಳಿಸಿದ್ದಾರೆ.

ದಾಖಲಾತಿ ಕೇಂದ್ರದ ವಿವರ ಹಾಗೂ ವೇಳಾಪಟ್ಟಿಯನ್ನು ಗುರುವಾರ (ಡಿ.23) ಸಂಜೆ 4ಕ್ಕೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.