ಬೆಂಗಳೂರು: ‘ನಗರದ ಕೆಲವು ಭಾಗಗಳು ಮಾತ್ರ ಯೋಜಿತವಾಗಿ ನಿರ್ಮಾಣವಾಗಿವೆ. ನಾವು ಸಂಪೂರ್ಣ ನಗರಕ್ಕೆ ಬಜೆಟ್ ರೂಪಿಸಿ, ಬೆಂಗಳೂರಿಗೆ ಹೊಸ ರೂಪ ನೀಡಲು ಮುಂದಾಗಿದ್ದೇವೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಬಿಬಿಎಂಪಿಯ 2024-25ನೇ ಸಾಲಿನ ಆಯವ್ಯಯಕ್ಕೆ ಸಂಬಂಧಿಸಿದಂತೆ ಡಿಸಿಎಂ, ನಗರ ವ್ಯಾಪ್ತಿಯ ಸಚಿವರು, ಶಾಸಕರು, ಸಂಸದರು, ವಿಧಾನ ಪರಿಷತ್ ಹಾಗೂ ರಾಜ್ಯಸಭೆ ಸದಸ್ಯರೊಂದಿಗೆ ಸೋಮವಾರ ಪೂರ್ವಭಾವಿ ಸಭೆ ನಡೆಸಿದರು.
‘ಸಂಚಾರ ದಟ್ಟಣೆ, ಕುಡಿಯುವ ನೀರು, ಘನತ್ಯಾಜ್ಯ ವಿಲೇವಾರಿ ಸಮಸ್ಯೆ ಇದೆ. 2013ರಿಂದ ಕುಡಿಯುವ ನೀರಿನ ದರ ಹೆಚ್ಚಳವಾಗಿಲ್ಲ. ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಲ್ಲಿ ಶೇ 50ಕ್ಕಿಂತ ಹೆಚ್ಚು ಮಂದಿ ಸರಿಯಾದ ತೆರಿಗೆ ಪಾವತಿ ಮಾಡುತ್ತಿಲ್ಲ. 2020ರಲ್ಲಿ ಆಸ್ತಿ ತೆರಿಗೆ ಮಸೂದೆ ತಿದ್ದುಪಡಿ ಮಾಡಿದಾಗ ದಂಡದ ಪ್ರಮಾಣ ಹೆಚ್ಚಾಗಿದೆ. ಈ ಬಗ್ಗೆ ಯಾರೊಬ್ಬರೂ ಗಮನಹರಿಸಿಲ್ಲ’ ಎಂದರು.
‘ಯಾವುದೇ ಪಕ್ಷ, ನಾಯಕರು ಅನಧಿಕೃತ ಫ್ಲೆಕ್ಸ್ ಹಾಕಿದರೂ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸುಪ್ರೀಂ ಕೋರ್ಟ್ ಆದೇಶದಂತೆ 6 ಟಿಎಂಸಿ ಅಡಿ ನೀರನ್ನು ಬೆಂಗಳೂರಿಗೆ ಬಳಸಲು ಸರ್ಕಾರಿ ಆದೇಶ ಹೊರಡಿಸಲಾಗಿದೆ. ನಗರದಲ್ಲಿ ಸಮಸ್ಯೆಗಳ ನಿವಾರಣೆಗೆ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ ಎಲ್ಲವೂ ಒಟ್ಟಾಗಿ ಕೆಲಸ ಮಾಡಬೇಕಿದೆ’ ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.