ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ವಿಶ್ವೇಶ್ವರಯ್ಯ ಜಲನಿಗಮ ನಿಯಮಿತ (ವಿಜೆಎನ್‌ಎಲ್) ಮುಂದಾಗಿದೆ. ಇದು ಮಲೆನಾಡಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಏನಿದು ಯೋಜನೆ?: ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನದ ನಂತರ ಕೃಷ್ಣರಾಜಸಾಗರ (ಕೆಆರ್‌ಎಸ್) ಜಲಾಶಯದ ನೀರಿನಲ್ಲಿ ಬೆಂಗಳೂರು ನಗರಕ್ಕೆ ಪಾಲು ಲಭಿಸುವುದಿಲ್ಲ. ಪ್ರಸ್ತುತ ಅಲ್ಲಿನ ಜಲಮಂಡಳಿಯು ಬೆಂಗಳೂರಿನ ಬೇಡಿಕೆಯ ಶೇ 62ರಷ್ಟು ನೀರನ್ನು (ಗೃಹ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಸೇರಿ ನಿತ್ಯ 145 ಕೋಟಿ ಲೀಟರ್) ಒದಗಿಸುತ್ತಿದೆ. 2031ರ ಹೊತ್ತಿಗೆ ಈ ಬೇಡಿಕೆ 354 ಕೋಟಿ ಲೀಟರ್‌ಗಳಷ್ಟಾಗಲಿದೆ ಎಂಬ ಅಂದಾಜು ಇರುವುದರಿಂದ ಸರ್ಕಾರ ಪರ್ಯಾಯ ನೀರಿನ ಮೂಲ ಅರಸಲು ಮುಂದಾಗಿತ್ತು.
ಶರಾವತಿಯಿಂದ ನೀರು: ಬೆಂಗಳೂರಿನ ಭವಿಷ್ಯದ ಕುಡಿಯುವ ನೀರಿನ ಬೇಡಿಕೆಗೆ ಜಲಮೂಲಗಳ ಬಳಕೆ ಬಗ್ಗೆ 2013ರಲ್ಲಿ ಜಲಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್ ಬಿ.ಎನ್. ತ್ಯಾಗರಾಜ ನೇತೃತ್ವದ 10 ಜನರ ತಜ್ಞರ ಸಮಿತಿ ವರದಿ ನೀಡಿತ್ತು. ಅದಕ್ಕೆ ಜೀವ ನೀಡಿ ಶರಾವತಿ ಕೊಳ್ಳದಿಂದ ಬೆಂಗಳೂರಿಗೆ ನೀರು ತರಲು ಸರ್ಕಾರ ಯೋಜಿಸಿದೆ.
ಬಿ.ಎನ್. ತ್ಯಾಗರಾಜ ಸಮಿತಿ ತನ್ನ ವರದಿಯಲ್ಲಿ ಲಿಂಗನಮಕ್ಕಿ ಜಲಾಶಯದ ಗರಿಷ್ಠ ನೀರಿನ ಸಂಗ್ರಹಣಾ ಸಾಮರ್ಥ್ಯ 151 ಟಿಎಂಸಿ ಅಡಿ. ಆದರೆ, ಸಾಮಾನ್ಯವಾಗಿ ಪ್ರತಿ ವರ್ಷ ಜಲಾಶಯಕ್ಕೆ ಒಟ್ಟಾರೆ 181 ಟಿಎಂಸಿ ಅಡಿ ಒಳಹರಿವು ಇರುತ್ತದೆ. ಹೆಚ್ಚುವರಿ 30 ಟಿಎಂಸಿ ಅಡಿ ನೀರನ್ನು ಸಮುದ್ರಕ್ಕೆ ಹರಿಸುವ ಬದಲು ಬೆಂಗಳೂರಿಗೆ ತರಬಹುದು ಎಂದು ಹೇಳಿತ್ತು.
ಡಿಪಿಆರ್ ಸಿದ್ಧ: ಬೆಂಗಳೂರಿಗೆ ಸುಮಾರು 360 ಕಿ.ಮೀ. ದೂರದಿಂದ ನೀರು ತರುವ ಈ ಯೋಜನೆಗೆ 2018ರಲ್ಲಿ ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿತ್ತು. ಶರಾವತಿಯಲ್ಲಿ ಲಭ್ಯವಾಗುವ 30 ಟಿಎಂಸಿ ಅಡಿ ನೀರಿನಲ್ಲಿ ಮೊದಲ ಹಂತದಲ್ಲಿ 15 ಟಿಎಂಸಿ ಅಡಿ ನೀರು ತಂದು ಅದರಲ್ಲಿ ಬಿಬಿಎಂಪಿಗೆ ವಾರ್ಷಿಕ 10 ಟಿಎಂಸಿ ಅಡಿ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ಕುಡಿಯುವ ಉದ್ದೇಶಕ್ಕೆ 5 ಟಿಎಂಸಿ ಅಡಿ ನೀರು ಬಳಕೆ ಮಾಡಲು ನಿರ್ಧರಿಸಿ ಅಂದಾಜು ₹ 12,500 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದು ವಿಜೆಎನ್‌ಎಲ್ ಮೂಲಗಳು ಹೇಳುತ್ತವೆ.
ಆದರೆ ಈ ಯೋಜನೆ ಪಶ್ಚಿಮಘಟ್ಟದ ಸೂಕ್ಷ್ಮತೆಗೆ ಧಕ್ಕೆ ತರಲಿದೆ ಎಂದು ಶರಾವತಿ ಕೊಳ್ಳದ ಜನರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಂತೆಯೇ, ‘ಯೋಜನೆ ಕಾರ್ಯಸಾಧುವಲ್ಲ ಎಂಬುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಅದನ್ನು ಅನುಷ್ಠಾನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ’ ಎಂದು 2019ರ ಆಗಸ್ಟ್ 13ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದರು. ನಂತರ ಜನಾಕ್ರೋಶ ತಣ್ಣಗಾಗಿತ್ತು. ಯೋಜನೆ ಕಪಾಟು ಸೇರಿತ್ತು. ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ನಮ್ಮದೇನೂ ಅಭ್ಯಂತರವಿಲ್ಲ: ಬೇಳೂರು
‘ಶರಾವತಿಯಿಂದ ಕುಡಿಯುವ ಉದ್ದೇಶಕ್ಕೆ ಬೆಂಗಳೂರಿಗೆ ನೀರು ಒಯ್ಯಲು ನಮ್ಮದೇನೂ ಅಭ್ಯಂತರವಿಲ್ಲ. ಅದಕ್ಕೂ ಮುನ್ನ ಸರ್ಕಾರ ಶಿವಮೊಗ್ಗ ಜಿಲ್ಲೆಯಲ್ಲಿನ ಶರಾವತಿ ಯೋಜನೆ ಸಂತ್ರಸ್ತರಿಗೆ ದಿನದ 24 ಗಂಟೆ ವಿದ್ಯುತ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಿ’ ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸುತ್ತಾರೆ. ‘ಶರಾವತಿ ನೀರನ್ನು ಕೃಷಿಗೆ ಒಯ್ಯುತ್ತಿಲ್ಲ .ಕುಡಿಯಲು ಕೊಡಲಾಗುತ್ತಿದೆ. ಮಲೆನಾಡಿನಲ್ಲಿ ಹೆದ್ದಾರಿ ಮಾಡಿದರೂ ಕಾಡು ನಾಶವಾಗುತ್ತದೆ. ಹಾಗೆಂದು ಕುಡಿಯುವ ನೀರಿಗೆ ವಿರೋಧ ಸಲ್ಲ. ಪರಿಸರವಾದಿಗಳ ಆಕ್ಷೇಪಕ್ಕೆ ಸರ್ಕಾರ ಉತ್ತರ ನೀಡಿ ಮನವರಿಕೆ ಮಾಡಲಿದೆ’ ಎಂದು ಪ್ರತಿಕ್ರಿಯಿಸಿದರು.
‘ಕಾರ್ಯಸಾಧ್ಯತೆ ಬದಲಿಗೆ ಜನಾಭಿಪ್ರಾಯ ಸಂಗ್ರಹಿಸಿ’
‘ಯೋಜನೆಗೆ ಸರ್ಕಾರ ಈಗಾಗಲೇ ಡಿಪಿಆರ್ ಸಿದ್ಧಪಡಿಸಿದೆ. ಮತ್ತೆ ಈ ಹಂತದಲ್ಲಿ ₹ 74 ಲಕ್ಷ ಖರ್ಚು ಮಾಡಿ ಕಾರ್ಯಸಾಧ್ಯತಾ ವರದಿ ಪಡೆಯಲು ವಿಜೆಎನ್‌ಎಲ್ ಮುಂದಾಗಿರುವುದು ತಮಾಷೆಯ ಸಂಗತಿ. ಅದರ ಬದಲಿಗೆ ಸರ್ಕಾರ ಶಿವಮೊಗ್ಗ– ಉತ್ತರ ಕನ್ನಡ ಜಿಲ್ಲೆಗಳಲ್ಲಿ ನದಿಪಾತ್ರದ ಜನರ ಅಭಿಪ್ರಾಯ ಸಂಗ್ರಹಿಸಲಿ’ ಎಂದು ಪರಿಸರ ತಜ್ಞ ಪತ್ರಕರ್ತ ನಾಗೇಶ ಹೆಗಡೆ ಒತ್ತಾಯಿಸುತ್ತಾರೆ.
‘ಸರ್ಕಾರ ಹೇಳುವಂತೆ ಅಲ್ಲಿ 30 ಟಿಎಂಸಿ ಅಡಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿಲ್ಲ. ಶರಾವತಿಯಲ್ಲಿ ಹೊಸ ನೀರು ಹರಿಯದೇ ಸಮುದ್ರದ ನೀರು ವಾಪಸ್ ನದಿಗೆ ಬರುತ್ತಿದೆ. ಅದರ ಪರಿಣಾಮವನ್ನು ಸಮುದ್ರದ ಸಮೀಪದ ಅಳಿವೆ ಅಂಚಿನಲ್ಲಿ ವಾಸಿಸುವವರು ಅನುಭವಿಸುತ್ತಿದ್ದಾರೆ. ಉಪ್ಪು ನೀರು ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಗುಂಡಬಾಳ ದಾಟಿ ಬಂದಿದೆ’ ಎನ್ನುತ್ತಾರೆ.
‘ಬೆಂಗಳೂರಿನ ಕೆರೆ– ಕಟ್ಟೆ ಜಲಮೂಲಗಳನ್ನು ಗುರುತಿಸಿ ಹೂಳು ತೆಗೆಸಿ ಮಳೆ ನೀರು ಹಿಡಿದಿಟ್ಟರೆ ಅಂತರ್ಜಲ ಮಟ್ಟ ಏರುತ್ತದೆ. ಇದರಿಂದ ಈಗಿನ 18 ಟಿಎಂಸಿ ಅಡಿ ಜೊತೆಗೆ ಇಲ್ಲೇ ಇನ್ನೂ 31 ಟಿಎಂಸಿ ಅಡಿ ನೀರು ಪಡೆಯಬಹುದು ಎಂದು ಜಲ ತಜ್ಞರು ಹೇಳಿದ್ದಾರೆ. ₹ 2200 ಕೋಟಿ ಖರ್ಚು ಮಾಡಿದರೆ ಬೆಂಗಳೂರಿನಲ್ಲಿನ 15 ಟಿಎಂಸಿ ಅಡಿ ಕೊಳೆ ನೀರನ್ನು ಸಿಂಗಾಪುರ ಮಾದರಿಯಲ್ಲಿ ಕುಡಿಯಲು ಯೋಗ್ಯವಾಗಿಸಬಹುದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯದರ್ಶಿಯೇ ವರದಿ ನೀಡಿದ್ದಾರೆ. ಈ ಸಂಗತಿಗಳತ್ತ ಸರ್ಕಾರ ಗಮನಹರಿಸಲಿ’ ಎನ್ನುತ್ತಾರೆ.
ಪರಿಸರಕ್ಕೆ ಆಗುವ ಹಾನಿ ಅರಿತು ಶರಾವತಿ ಕೊಳ್ಳದ ಜನರು ವಿರೋಧ ವ್ಯಕ್ತಪಡಿಸಿದ್ದರಿಂದ ಹಿಂದಿನ ಸರ್ಕಾರ ಯೋಜನೆಯನ್ನು ಕೈಬಿಟ್ಟಿತ್ತು. ಈಗ ಮತ್ತೊಂದು ಹೋರಾಟಕ್ಕೆ ಅಣಿಯಾಗಲಿದ್ದೇವೆ.–ಅಖಿಲೇಶ್ ಚಿಪ್ಪಳಿ, ಪರಿಸರಾಸಕ್ತ ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.