ಬೆಂಗಳೂರು: ದಾನಿಗಳ ವೀರ್ಯ ಪಡೆದು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಂಡು ಮಕ್ಕಳನ್ನು ಹೊಂದಲು 13 ದಂಪತಿಗಳಿಗೆ ಹೈಕೋರ್ಟ್ ಅವಕಾಶ ಕಲ್ಪಿಸಿದೆ.
‘ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ನೂತನ ತಿದ್ದುಪಡಿ ಪ್ರಕಾರ ದಾನಿಗಳ ವೀರ್ಯ ಪಡೆಯಲು ನಿರ್ಬಂಧವಿದೆ. ಆದರೆ, ಎಲ್ಲವನ್ನೂ ಏಕರೂಪದಲ್ಲಿ ಗಮನಿಸುವುದು ಸರಿಯಲ್ಲ. ಪ್ರತಿಯೊಂದನ್ನೂ ಆಯಾ ಪ್ರಕರಣಕ್ಕೆ ತಕ್ಕಂತೆ ಗಮನಿಸಿ, ನಿಯಮಗಳನ್ನು ಆಧರಿಸಿ ಸಡಿಲಗೊಳಿಸಬಹುದು’ ಎಂದು ಆದೇಶಿಸಿದೆ.
2023ರ ಮಾರ್ಚ್ 14ರಿಂದ ಜಾರಿಗೆ ಬಂದಿರುವ ಬಾಡಿಗೆ ತಾಯ್ತನ ತಿದ್ದುಪಡಿ ನಿಯಮ 7 ಅನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಇಂತಹುದೇ ವಿಚಾರ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿ ಇದೆ. ಆದಾಗ್ಯೂ, ಅರ್ಜಿದಾರ ದಂಪತಿಗಳ ವೈದ್ಯಕೀಯ ಸ್ಥಿತಿಗತಿಗಳನ್ನು ಪರಿಗಣಿಸಿ ಬಾಡಿಗೆ ತಾಯ್ತನದ ಮೂಲಕ ಅವರು ಮಕ್ಕಳನ್ನು ಪಡೆಯಬಹುದು. ಈ ಸಂಬಂಧ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳು ತಕ್ಷಣವೇ ಪರಿಶೀಲಿಸಿ ಅಗತ್ಯ ಪ್ರಮಾಣ ಪತ್ರ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.