ಬೆಂಗಳೂರು: ‘ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ) ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿ ಜನ’ ಎಂದು ಕೆಂಡ ಕಾರಿರುವ ಹೈಕೋರ್ಟ್, ‘ಇವರೆಲ್ಲಾ ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆಯಬಲ್ಲರು. ಇಂಥವರಿಗೆ ಕಠಿಣ ಶಿಕ್ಷೆಯ ಅಗತ್ಯವಿದೆ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ.
‘ನಮ್ಮ ವಿರುದ್ಧ ದಾವಣಗೆರೆ ಜಿಲ್ಲೆ ಜಗಳೂರು ಪಟ್ಟಣದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಜಗಳೂರು ಬೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ.ಪ್ರವೀಣ್ (46), ವಿಭಾಗೀಯ ಅಧಿಕಾರಿ ಎಸ್.ಸಿ.ಗಂಗಾಧರ ತಿಲಕ್ (56) ಮತ್ತು ಪಟ್ಟಣದ ಲೈನ್‌ಮನ್ ಅಸೀಫ್ ಸೋಮಲಾಪುರ (33) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.
ಅರ್ಜಿಯನ್ನು ವಿಚಾರಣೆಗೆ ಕೂಗುತ್ತಿದ್ದಂತೆಯೇ ನ್ಯಾಯಮೂರ್ತಿಗಳು ‘ಅರ್ಜಿದಾರರು ಬೆಸ್ಕಾಂ ಉದ್ಯೋಗಿಗಳಲ್ಲವೇ’ ಎಂದು ಅವರ ಪರ ವಕೀಲರನ್ನು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಹೌದೆಂದು ತಮ್ಮ ವಾದಾಂಶ ವಿವರಿಸಲು ಮುಂದಾದರು.
ಇದನ್ನು ಅರ್ಧಕ್ಕೇ ತಡೆದ ನ್ಯಾಯಮೂರ್ತಿಗಳು, ‘ಈ ಬೆಸ್ಕಾಂ ಅಧಿಕಾರಿಗಳು ದೂರು ಬಂದ ಕಡೆ ತಕ್ಷಣವೇ ಹೋಗಿ ಸ್ಥಳ ಪರಿಶೀಲನೆ ಮಾಡುವುದಿಲ್ಲ. ಪಾದಚಾರಿಗಳ ಜೀವವನ್ನು ಸುಲಭವಾಗಿ ತೆಗೆದು ಬಿಡುತ್ತಾರೆ. ಇವರ ನಿರ್ಲಕ್ಷ್ಯದಿಂದ ಇನ್ನೆಷ್ಟು ಸಾವು ಸಂಭವಿಸಬೇಕು. ಪುಣ್ಯ ಎಂದರೆ ಈ ಪ್ರಕರಣದಲ್ಲಿ ಸಾವು ಸಂಭವಿಸಿಲ್ಲ. ಪ್ರಕರಣ ರದ್ದು ಕೋರಿರುವ ಈ ಅರ್ಜಿಗಳನ್ನು ನಾನು ಪರಿಗಣಿಸುವುದೇ ಇಲ್ಲ. ನನಗೇನಾದರೂ ಅವಕಾಶ ಸಿಕ್ಕರೆ ಅರ್ಜಿದಾರರಿಗೆ ಶಿಕ್ಷೆ ವಿಧಿಸುತ್ತೇನೆ’ ಎಂದು ಮೌಖಿಕ ಎಚ್ಚರಿಕೆ ನೀಡಿದರು.
ಅರ್ಜಿದಾರರ ವಿರುದ್ಧದ ವಿಚಾರಣಾ ನ್ಯಾಯಾಲಯದ ನ್ಯಾಯಿಕ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು 2025ರ ಜನವರಿ ಮೊದಲ ವಾರಕ್ಕೆ ಮುಂದೂಡಿದರು.
ಪ್ರಕರಣವೇನು?: ಜಗಳೂರು ತಾಲ್ಲೂಕಿನ ಮೂಡಲ ಮಾಚಿಕೆರೆ ನಿವಾಸಿ 15ರ ಬಾಲಕ ಪಾಂಡುರಂಗ 2020ರ ಅಕ್ಟೋಬರ್ 27ರಂದು ಬೆಳಿಗ್ಗೆ ಹೊಲಕ್ಕೆ ಹೋಗುವಾಗ ಹಸುವೊಂದು ಹೊಲಕ್ಕೆ ನುಗ್ಗುತ್ತಿದ್ದುದನ್ನು ತಡೆಯಲು ಮುಂದಾಗಿದ್ದ. ಈ ವೇಳೆ ಆತನ ಕಾಲು ರಸ್ತೆ ಬದಿಯಲ್ಲಿನ ವಿದ್ಯುತ್ ಕಂಬದ ತಂತಿಗೆ ತಾಗಿ, ವಿದ್ಯುತ್ ಪ್ರವಹಿಸಿದೆ. ಇದರಿಂದ ಅವನ ಎರಡೂ ಕಾಲುಗಳು ಮತ್ತು ಕೈಗಳಿಗೆ ತೀವ್ರ ಗಾಯವಾಗಿವೆ’ ಎಂದು ಆರೋಪಿಸಿ ಆತನ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.