ಬೆಂಗಳೂರು: ‘ಕರ್ನಾಟಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕೇಂದ್ರವಾಗಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಕರ್ನಾಟಕ ವಾಣಿಜ್ಯ ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಶನಿವಾರ ಆಯೋಜಿಸಿದ್ದ ‘ಸಂಸ್ಥಾಪಕರ ದಿನಾಚರಣೆ ಹಾಗೂ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೈಗಾರಿಕಾ ಕ್ಷೇತ್ರದಲ್ಲಿ ನೆರೆಯ ರಾಜ್ಯಗಳು ಒಡ್ಡುತ್ತಿರುವ ಸವಾಲಿನ ನಡುವೆಯೂ ನಮ್ಮ ರಾಜ್ಯ ಬಂಡವಾಳ ಹೂಡಿಕೆಯಲ್ಲಿ ಮುಂಚೂಣಿಯಲ್ಲಿದೆ. ನೂತನ ಉದ್ದಿಮೆಗಳ ಸ್ಥಾಪನೆಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ.ಯುವಜನರು ಉದ್ದಿಮೆಗಳನ್ನು ಪ್ರಾರಂಭಿಸಬೇಕು. ಇದರಿಂದ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ’ ಎಂದರು.
‘ದೇಶದ ಆರ್ಥಿಕತೆಯಲ್ಲಿ ಕರ್ನಾಟಕ ಉತ್ತಮ ಕೊಡುಗೆ ನೀಡುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯ ಅವರು ಎಫ್‌ಕೆಸಿಸಿಐ ನಂತಹ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಇದಕ್ಕೆ ಉತ್ತಮ ಬುನಾದಿಯನ್ನು ಹಾಕಿದ್ದಾರೆ. ದೇಶದ ಶೇಕಡ 60ರಷ್ಟು ಸಾಫ್ಟ್‌ವೇರ್ ಉತ್ಪನ್ನಗಳು ಬೆಂಗಳೂರಿನಲ್ಲಿ ತಯಾರಿಸಲಾಗುತ್ತಿದೆ. ಇದು ಸರ್.ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲ’ ಎಂದು ಹೇಳಿದರು.
‘ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ನಿರ್ಮಾಣವಾಗುತ್ತಿದೆ. ಇದಕ್ಕಾಗಿಯೇ 20 ಸಾವಿರ ಎಕರೆ ಭೂಮಿ ಸಿದ್ಧಪಡಿಸಲಾಗುತ್ತಿದೆ. ಎಚ್‌ಎಎಲ್ ಸೇರಿದಂತೆ ಪ್ರಮುಖ ಕಂಪನಿಗಳು ಇಲ್ಲಿ ಸ್ಥಾಪನೆಯಾಗಲಿವೆ. ಬೆಂಗಳೂರು ಹೊರತುಪಡಿಸಿ ಬೇರೆ ಪಟ್ಟಣಗಳತ್ತ ಉದ್ಯಮಿಗಳ ಗಮನ ಹರಿಸಬೇಕು’ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಭಾಗ್ಯಲಕ್ಷ್ಮಿ ಕಮರ್ಷಿಯಲ್ ಕಾರ್ಪೊರೇಷನ್‌ನ ಮಾಲೀಕ ಬಿ.ಎ. ಶ್ರೀನಿವಾಸ ಗುಪ್ತ ಮತ್ತು ಶ್ರೀಲಕ್ಷ್ಮಿ ಶ್ರೀನಿವಾಸ ಗುಪ್ತ ದಂಪತಿಗೆ ‘ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.