ADVERTISEMENT

ಸಾಹಿತ್ಯ ಕೃತಿಗಳಿಗೆ ಲೇಖಕಿಯರ ಸಂಘದ ವಿವಿಧ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 19:32 IST
Last Updated 14 ಜೂನ್ 2024, 19:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘವು 2023ನೇ ಸಾಲಿನ ವಿವಿಧ ವಾರ್ಷಿಕ ದತ್ತಿ ಪ್ರಶಸ್ತಿಗಳನ್ನು ಘೋಷಿಸಿದ್ದು, ಇದೇ 23ರಂದು ಇಲ್ಲಿನ ಜೆ.ಸಿ. ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. 

ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪ ಅವರು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ‘ಕಾಕೋಳು ಸರೋಜಮ್ಮ ಕಾದಂಬರಿ ಪ್ರಶಸ್ತಿ’ಗೆ ಚಂದ್ರಮತಿ ಸೋಂದಾ ಅವರ ‘ದುಪಡಿ’, ‘ಭಾಗ್ಯ ನಂಜಪ್ಪ ವಿಜ್ಞಾನ ಸಾಹಿತ್ಯ ಪ್ರಶಸ್ತಿ’ಗೆ ಬಿ. ರೇವತಿ ನಂದನ್ ಅವರ ‘ತೋಟದ ಲೋಕದ ಪಾಠಗಳು’, ‘ನಾಗರತ್ನ ಚಂದ್ರಶೇಖರ್ (ಲಲಿತ ಪ್ರಬಂಧ) ಪ್ರಶಸ್ತಿ’ಗೆ ಸರಸ್ವತಿ ಭೋಸಲೆ ಅವರ ‘ಕಾಡತಾವ ನೆನಪ’, ‘ಜಿ.ವಿ. ನಿರ್ಮಲ ಪ್ರಶಸ್ತಿ’ಗೆ ವಿಜಯಾ ಶಂಕರ ಅವರ ‘ತಲ್ಲಣಗಳ ನಡುವೆ’, ‘ತ್ರಿವೇಣಿ ಸಾಹಿತ್ಯ ಪುರಸ್ಕಾರ’ಕ್ಕೆ ಮಾಧವಿ ಭಂಡಾರಿ ಕೆರೆಕೋಣ ಅವರ ‘ಗುಲಾಬಿ ಕಂಪಿನ ರಸ್ತೆ’ ಕೃತಿ ಆಯ್ಕೆಯಾಗಿದೆ. 

ADVERTISEMENT

‘ಕಮಲಾ ರಾಮಸ್ವಾಮಿ (ಪ್ರವಾಸ ಸಾಹಿತ್ಯ) ಪ್ರಶಸ್ತಿ’ಗೆ ನೂತನ ದೋಶೆಟ್ಟಿ ಅವರ ‘ಸ್ವರ್ಗದೊಂದಿಗೆ ಅನುಸಂಧಾನ’, ‘ನುಗ್ಗೆಹಳ್ಳಿ ಪಂಕಜ (ಹಾಸ್ಯ ಕೃತಿ) ಪ್ರಶಸ್ತಿ’ಗೆ ಸುಮಾ ರಮೇಶ್ ಅವರ ‘ಹಚ್ಚೆ ದಿನ್’, ‘ಗುಣಸಾಗರಿ ನಾಗರಾಜ್ (ಮಕ್ಕಳ ಸಾಹಿತ್ಯ) ಪ್ರಶಸ್ತಿ’ಗೆ ರಾಧಾ ಕುಲಕರ್ಣಿ ಅವರ ‘ಏರಿ ರಂಗಮಂಚ, ತೋರಿ ಈ ಪ್ರಪಂಚ’, ‘ಇಂದಿರಾ ವಾಣಿರಾವ್ (ನಾಟಕ) ಪ್ರಶಸ್ತಿ’ಗೆ ಕಾವ್ಯಾ ಕಡಮೆ ಅವರ ‘ಸಂಜೀವಿನಿ ಸ್ಟೋರ್ಸ್’, ‘ಜಯಮ್ಮ ಕರಿಯಣ್ಣ (ಸಂಶೋಧನೆ) ಪ್ರಶಸ್ತಿ’ಗೆ ಲೀಲ ವಾಸುದೇವ್ ಅವರ ‘ಮೊರಸು ಒಕ್ಕಲಿಗರ ಪ್ರಧಾನ ಸಂಪ್ರದಾಯಗಳು’ ಕೃತಿ ಭಾಜನವಾಗಿದೆ.

‘ತ್ರಿವೇಣಿ ದತ್ತಿನಿಧಿ’ ಅಡಿ ಸುಧಾ ಆಡುಕಳ ಅವರ ‘ನೀಲಿ ಮತ್ತು ಸೇಬು’ ಕೃತಿ ಪ್ರಥಮ, ಫೌಝಿಯಾ ಸಲೀಂ ಅವರ ‘ನೀ ದೂರ ಹೋದಾಗ’ ಕೃತಿ ದ್ವಿತೀಯ ಹಾಗೂ ಸಿಂಧುಚಂದ್ರ ಅವರ ‘ಚೂರು ಚಂದ್ರ ಮೂರು ಕಿರಣ’ ಕೃತಿ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. 

ಉಷಾ. ಪಿ.ರೈ ಅವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ಶೋಭಾ ನಾಯಕ ಅವರ ‘ಶಯ್ಯಾಗೃಹದ ಸುದ್ದಿಗಳು’, ‘ನಿರುಪಮಾ ಕಥಾ ಪ್ರಶಸ್ತಿ’ಗೆ ಡಿಜಿಟಲ್ ಮಾಧ್ಯಮದಲ್ಲಿ ಮಾಲತಿ ಹೆಗಡೆ ಅವರ ‘ಪಲ್ಲಟ’, ಮುದ್ರಣ ಮಾಧ್ಯಮದಲ್ಲಿ ಮಂಜುಳಾ ಗೋನಾಳ ಅವರ ‘ಬಿದಿರು ಮಳೆ ಸೇವೆ’ ಕಥೆಗಳು ಆಯ್ಕೆಯಾಗಿವೆ. ‘ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿ’ಗೆ ಕಾತ್ಯಾಯಿನಿ ಕುಂಜಿಬೆಟ್ಟು ಅವರ ‘ನಕ್ಷತ್ರ ನಕ್ಕ ರಾತ್ರಿ’, ‘ಶ್ರೀಲೇಖಾ (ಕಾವ್ಯ ಪ್ರಶಸ್ತಿ) ಪ್ರಶಸ್ತಿ’ಗೆ ದೇವಿಕಾ ನಾಗೇಶ್ ಅವರ ‘ಮೌನ ಹೊದ್ದವಳು’ ಕೃತಿ ಭಾಜನವಾಗಿದೆ. 

ಸಮಗ್ರ ಸಾಧನೆಗೆ ಶಿಕ್ಷಕಿ ಅಥವಾ ಲೇಖಕಿಗೆ ನೀಡುವ ‘ಕೆ.ಟಿ. ಬನಶಂಕರಮ್ಮ ಪ್ರಶಸ್ತಿ’ಗೆ ಮಂಜುಳಾ ಹಿರೇಮಠ, ಪ್ರಕಾಶಕಿ ಅಥವಾ ಲೇಖಕಿಗೆ ನೀಡುವ ‘ಪ್ರೇಮಾಭಟ್ಟ ಮತ್ತು ಎ.ಎಸ್.ಭಟ್ಟ ಪ‍್ರಶಸ್ತಿ’ಗೆ ಅಕ್ಷತಾ ಹುಂಚದಕಟ್ಟೆಯವರ ಅಹರ್ನಿಶಿ ಪ್ರಕಾಶನ ಆಯ್ಕೆಯಾಗಿದೆ.

ಜಾನಪದ ಸಂಶೋಧಕ ಕೆ.ಆರ್.ಸಂಧ್ಯಾರೆಡ್ಡಿ, ಲೇಖಕಿ ಎಲ್.ಜಿ.ಮೀರಾ ಹಾಗೂ ‘ಸುಧಾ’ ವಾರ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಚ.ಹ.ರಘುನಾಥ ಅವರನ್ನು ಒಳಗೊಂಡ ಸಮಿತಿ ಪ್ರಶಸ್ತಿಗಳಿಗೆ ಈ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕವಿ ಎಚ್.ಎಸ್. ಶಿವಪ್ರಕಾಶ್ ಉದ್ಘಾಟಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.