ಬೆಂಗಳೂರು: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಮೇಲ್ವಿಚಾರಣಾ ಪ್ರಾಧಿಕಾರಕ್ಕೆ ಸಲಹೆಗಾರರಾಗಿ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣ್ಯಂ ಅವರನ್ನು ನೇಮಿಸಲಾಗಿದೆ.
ಸುಪ್ರೀಂ ಕೋರ್ಟ್ 2022ರಲ್ಲಿ ಅಂದಿನ ಅವಿಭಜಿತ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆಯಿಂದ ಉಂಟಾದ ಪರಿಸರ ಹಾನಿಯಿಂದ ಹಾಳಾದ ಪ್ರದೇಶಗಳ ಪುನಶ್ಚೇತನಕ್ಕೆ ವಿಶೇಷ ಉದ್ದೇಶಗಳ ನಿಗಮವಾಗಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ ರೂಪಿಸಿ, ನಿಗಮದ ಕೆಲಸ ಕಾರ್ಯಗಳ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ ಅವರನ್ನು ನೇಮಿಸಿತ್ತು.
ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದ ವಿ. ಬಾಲಸುಬ್ರಮಣ್ಯಂ, ನಂತರ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಯಾಗಿದ್ದ ಜಮೀನು ಗುರುತಿಸಲು ಮತ್ತು ಹಿಂಪಡೆಯಲು ಕ್ರಮಗಳನ್ನು ಶಿಫಾರಸು ಮಾಡಲು ರಚಿಸಲಾಗಿದ್ದ ಜಂಟಿ ಸದನ ಸಮಿತಿಯ ಸಲಹೆಗಾರರಾಗಿ ನೇಮಕಗೊಂಡಿದ್ದರು. ಬಳಿಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭೂ ಮಾಫಿಯಾಗಳು ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಭೂಮಿಯನ್ನು ಗುರುತಿಸಿ, ಹಿಂಪಡೆಯಲು ರಚಿಸಲಾಗಿದ್ದ ಕಾರ್ಯಪಡೆಯ ಅಧ್ಯಕ್ಷರಾಗಿದ್ದರು.
ಗಣಿ ಬಾಧಿತ ಪ್ರದೇಶಗಳಲ್ಲಿ ಪರಿಸರ ಪುನಶ್ಚೇತನ ಕಾರ್ಯಗಳ ಕುರಿತು ಆಸಕ್ತಿ ಹೊಂದಿರುವವರು ಅವರನ್ನು ಇ–ಮೇಲ್ (vbalu41@gmail.com) ಅಥವಾ ಮೊಬೈಲ್ ಸಂಖ್ಯೆಯಲ್ಲಿ 9845970092 ಸಂಪರ್ಕಿಸಬಹುದು. ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ 2ನೇ ಮಹಡಿಯಲ್ಲಿರುವ ನಿಗಮದ ಕಚೇರಿಗೆ ಪತ್ರವನ್ನೂ ಬರೆಯಬಹುದು ಎಂದು ನಿಗಮದ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.