ADVERTISEMENT

ಬೆಳಗಾವಿ ಅಧಿವೇಶನ | ಸರಕು, ಕ್ಯಾಬ್‌: ತೆರಿಗೆ ಪದ್ಧತಿ ಮತ್ತೆ ತ್ರೈಮಾಸಿಕ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 15:45 IST
Last Updated 12 ಡಿಸೆಂಬರ್ 2023, 15:45 IST
<div class="paragraphs"><p>ಬೆಳಗಾವಿ ಅಧಿವೇಶನ (ಪ್ರಾತಿನಿಧಿಕ ಚಿತ್ರ)</p></div>

ಬೆಳಗಾವಿ ಅಧಿವೇಶನ (ಪ್ರಾತಿನಿಧಿಕ ಚಿತ್ರ)

   

ವಿಧಾನಸಭೆ: ₹10 ಲಕ್ಷದಿಂದ ₹ 15 ಲಕ್ಷದವರೆಗಿನ ಮೌಲ್ಯ ಹಾಗೂ 1.5 ಟನ್‌ನಿಂದ 12 ಟನ್‌ವರೆಗಿನ ತೂಕದ ಸರಕು ಸಾಗಣೆ ಮತ್ತು ಕ್ಯಾಬ್‌ ವಾಹನಗಳಿಗೆ ಜೀವಿತಾವಧಿ ತೆರಿಗೆ ವಿಧಿಸುವುದನ್ನು ಹಿಂಪಡೆದು, ಹಿಂದಿನಂತೆಯೇ ತ್ರೈಮಾಸಿಕವಾಗಿ ತೆರಿಗೆ ಸಂಗ್ರಹಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ಎರಡನೇ ತಿದ್ದುಪಡಿ) ಮಸೂದೆ–2023’ ಅನ್ನು ಮಂಗಳವಾರ ಮಂಡಿಸಲಾಯಿತು.

1.5 ಟನ್‌ ತೂಕದಿಂದ 12 ಟನ್‌ ಒಟ್ಟು ತೂಕದ ಸರಕು ಸಾಗಣೆ ವಾಹನಗಳ ಪೂರ್ಣಾವಧಿ ತೆರಿಗೆ, ರಾಜ್ಯದ ಹೊರಗೆ ನೋಂದಣಿಯಾಗಿರುವ ಕ್ಯಾಬ್‌ಗಳ ಪೂರ್ಣಾವಧಿ ತೆರಿಗೆ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಜುಲೈ ತಿಂಗಳಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ಅಂಗೀಕಾರ ನೀಡಲಾಗಿತ್ತು. ಆದರೆ, ಜೀವಿತಾವಧಿ ತೆರಿಗೆ ಪಾವತಿಯಿಂದ ತಮಗೆ ಹೊರೆಯಾಗುತ್ತದೆ ಎಂದು ವಾಹನ ಮಾಲೀಕರು ವಿರೋಧಿಸಿದ್ದರು.

ADVERTISEMENT

ಈಗ ಇರುವ ವಾಹನಗಳಿಗೆ ಹಿಂದಿನಂತೆಯೇ ತ್ರೈಮಾಸಿಕ ಅವಧಿಗೆ ತೆರಿಗೆ ಪಾವತಿಗೆ ಅವಕಾಶ ಕಲ್ಪಿಸುವ ಅಂಶ ಈ ತಿದ್ದುಪಡಿ ಮಸೂದೆಯಲ್ಲಿದೆ. ಹೊಸ ವಾಹನಗಳಿಗೆ ಮಾತ್ರ ಜೀವಿತಾವಧಿ ತೆರಿಗೆ ಸಂಗ್ರಹಿಸಲು ಮಸೂದೆ ಅವಕಾಶ ಕಲ್ಪಿಸಲಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಸೂದೆಯನ್ನು ಮಂಡಿಸಿದರು.

ನ್ಯಾಯಾಲಯಗಳ ಹೊರೆ ಇಳಿಕೆ

ಒಂದೇ ಪ್ರಕರಣದಲ್ಲಿ ಹಲವು ಸ್ವರೂಪದ ಮೇಲ್ಮನವಿಗಳನ್ನು ಹೈಕೋರ್ಟ್‌ಗೆ ಸಲ್ಲಿಸುವುದನ್ನು ತಡೆದು, ಹೈಕೋರ್ಟ್‌ನಲ್ಲಿ ಪ್ರಕರಣಗಳ ಸಂಖ್ಯೆಯನ್ನು ಇಳಿಕೆ ಮಾಡುವ ಪ್ರಸ್ತಾವವುಳ್ಳ ‘ಕರ್ನಾಟಕ ಹೈಕೋರ್ಟ್‌ (ತಿದ್ದುಪಡಿ) ಮಸೂದೆ–2023’ ಅನ್ನು ಕಾನೂನು ಸಚಿವ ಎಚ್‌.ಕೆ. ಪಾಟೀಲ ಮಂಡಿಸಿದರು.

ಈ ತಿದ್ದುಪಡಿ ಮಸೂದೆಯು, ಎಲ್ಲ ಮೊದಲನೇ ಮೇಲ್ಮನವಿಗಳನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ಮತ್ತು ಎರಡನೇ ಅಪೀಲುಗಳನ್ನು ದ್ವಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.

₹ 15 ಲಕ್ಷ ಮೌಲ್ಯದವರೆಗಿನ ಸಿವಿಲ್‌ ವ್ಯಾಜ್ಯಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ಜಿಲ್ಲಾ ನ್ಯಾಯಾಲಯಗಳಲ್ಲೇ ವಿಚಾರಣೆ ನಡೆಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ಸಿವಿಲ್‌ ನ್ಯಾಯಾಲಯಗಳ (ತಿದ್ದುಪಡಿ) ಮಸೂದೆ–2023’ ಅನ್ನೂ ಕಾನೂನು ಸಚಿವರು ಮಂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.